ಮಂಗಳೂರು : ಅಗ್ಗದ ದರದಲ್ಲಿ ಸಾರಾಯಿ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡಲು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಾಗಿರುವುದು, ಕಾಂಗ್ರೆಸ್ ಸರಕಾರದ ಗುಪ್ತ ಅಜೆಂಡಾ ಎಂದು ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕಡಿಮೆ ದರದಲ್ಲಿ ಮದ್ಯ ಬೇಕು ಎಂಬ ಒತ್ತಾಯವನ್ನು ಯಾರು ಮಾಡಿಲ್ಲ. ಸರಕಾರ ತನ್ನದೇ ಗುಪ್ತ ಹಿತಾಸಕ್ತಿಗಾಗಿ ಕಡಿಮೆ ದರದ ಮದ್ಯ ಮಾರಾಟಕ್ಕೆ ಮುಂದಾಗುತ್ತಿದೆ. ಬಡವರ ಏಳಿಗೆಯು ಕಡಿಮೆ ದರದ ಮದ್ಯ ನೀಡುವುದರಿಂದ ಆಗುವುದಿಲ್ಲ ಎಂಬುವುದನ್ನು ಸರಕಾರಿ ಅರಿತುಕೊಳ್ಳಬೇಕು. ಈ ಪ್ರಸ್ತಾಪವನ್ನು ಕೈಬಿಡದಿದ್ದರೆ ವಿವಿಧ ಜನಪರ ಸಂಘಟನೆಗಳೊಂದಿಗೆ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.
ಸಾರಾಯಿ ಅಥವಾ ಮದ್ಯ ಜೀವನಾವಶ್ಯಕ ವಸ್ತು ಅಲ್ಲ. ಯುವ ಸಮುದಾಯವನ್ನು ದುಶ್ಚಟಗಳಿಗೆ ಬಲಿ ಮಾಡುವ ಸರಕಾರದ ಈ ಪ್ರಸ್ತಾಪ ತೀರ ಅಪ್ರಸ್ತುತ. ಕಡಿಮೆ ದರದ ಮದ್ಯ ಮಾರುಕಟ್ಟೆಯಲ್ಲಿ ಲಭ್ಯವಾದರೆ ಬಡವರು ಇನ್ನಷ್ಟು ಹೆಚ್ಚು ಕುಡಿದು ಮತ್ತಷ್ಟು ಬಡವರಾಗುತ್ತಾರೆ. ಬಡವರು ಬಡತನ ರೇಖೆಯಿಂದ ಮೇಲೆ ಬರಬೇಕು ಹಾಗೂ ಆರೋಗ್ಯವಂತರಾಗಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಹಿಂದಿನ ಸರಕಾರದ ಬೊಕ್ಕಸಕ್ಕೆ ಹೊರೆಯಾದರೂ, ಸಾರಾಯಿ ನಿಷೇಸಿತ್ತು. ಆದರೆ ಇದೀಗ ಕಡಿಮೆ ದರದ ಮದ್ಯ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದರೆ, ಇದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಾರಕ ಪರಿಣಾಮ ಉಂಟು ಮಾಡಲಿದೆ ಎಂದು ಅವರು ಹೇಳಿದ್ದಾರೆ. ನಮ್ಮ ಯುವಕರು ಮದ್ಯ ಮಾರಾಟದ ಲೈಸನ್ಸ್ನ ಮೂಲಕ ಉದ್ಯೋಗ ಪಡೆಯುವ ಅಗತ್ಯವಿಲ್ಲ. ಬದಲಾಗಿ ಸರಕಾರ ಬೇರೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿ ಮಾಡಲಿ ಎಂದುರು.