ನವದೆಹಲಿ: ಅಡಿಕೆಗೆ ಕೊಳೆ ರೋಗ ತಗುಲಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಲು ಸಂಸದ ಅನಂತ್ ಕುಮಾರ್ ಹೆಗ್ಡೆ ನೇತೃತ್ವದ ನಿಯೋಗವು ಗುರುವಾರ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿಯಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ಸುರೇಶ್ ಅಂಗಡಿ, ರಮೇಶ್ ಕತ್ತಿ, ಆಯನೂರು ಮಂಜುನಾಥ್, ರಮೇಶ್ ಜಿಗಜಿಣಗಿ, ಪಿ.ಸಿ.ಗದ್ದಿ ಗೌಡರ್ ಅವರನ್ನೊಳಗೊಂಡ ನಿಯೋಗ ಅನಂತ್ ಕುಮಾರ್ ನೇತೃತ್ವದಲ್ಲಿ ನವದೆಹಲಿಯಲ್ಲಿ ಶರದ್ ಪವಾರ್ ಅವರನ್ನು ಭೇಟಿಯಾಗಿ, ತಕ್ಷಣ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂಧಿಸಬೇಕೆಂದು ಮನವಿ ಮಾಡಿಕೊಂಡರು.
ಸಚಿವರು ಮನವಿಗೆ ಸ್ಪಂಧಿಸಿದ್ದು, ಕರ್ನಾಟಕಕ್ಕೆ ತಕ್ಷಣ ತಜ್ಞರ ತಂಡವನ್ನು ಸಮೀಕ್ಷೆ ನಡೆಸಲು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂಬುವುದಾಗಿ ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ.
ಸಂಸದರ ನಿಯೋಗ, ಕೂಡಲೆ ಕೇಂದ್ರ ವಿಶೇಷ ಪ್ಯಾಕೇಜ್ ಅಡಿ 300 ಕೋಟಿ ರೂ. ಬಿಡುಗಡೆ ಮಾಡಬೇಕು, ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು, ಅಲ್ಪಾವಧಿ ಸಾಲಗಳ ಅವಧಿ ವಿಸ್ತರಣೆ ಮಾಡಬೇಕು, ಪೈಟೋಪ್ತೆರಾ ಶಿಲೀಂಧ್ರ ನಿಯಂತ್ರಣಕ್ಕೆ ಹೊಸ ಸಂಶೋಧನೆ ಮಾಡಬೇಕು, ಅಡಿಕೆ ರೈತರಿಗೆ ವಿಶೇಷ ಪ್ಯಾಕೇಜ್ ಅಡಿ ಸಹಾಯಧನ ನೀಡಬೇಕೆಂದು ಒತ್ತಾಯಿಸಿದೆ ಎಂದು ನಳಿನ್ ಹೇಳಿದ್ದಾರೆ.