Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸಂಸತ್ತಿನಲ್ಲಿ ಸರ್ಕಾರವನ್ನು ಆಗ್ರಹಿಸಿದ ಸಂಸದ ನಳಿನ್

ಇಂದು ಲೋಕಸಭೆಯ ಶೂನ್ಯವೇಳೆಯಲ್ಲಿ ಸಂಸದ  ನಳಿನ್ ಕುಮಾರ್ ಕಟೀಲ್ ಇವರು ಮಲೆನಾಡು ಪ್ರದೇಶದ ಅಡಿಕೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸದನದ ಗಮನ ಸೆಳೆದರು.

ಅಡಿಕೆ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಾವಿರಾರು ರೈತ ಕುಟುಂಬಗಳು ಬೆಳೆದ ಅಡಿಕೆ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕೃಷಿಕರು ಕಂಗಾಲಾಗಿರುತ್ತಾರೆ. ಕೇಂದ್ರ ಸರಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗೆ ಬೆಂಬಲ ಬೆಲೆ ಮತ್ತು ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಈ ಮೂಲಕ ಕೇಂದ್ರ ಸರಕಾರವನ್ನು ಸಂಸದರು ಆಗ್ರಹಿಸಿದರು.

ದೇಶದಲ್ಲಿ ಅಡಿಕೆ ಮಧ್ಯವರ್ತಿಗಳು ಪ್ರಮುಖವಾಗಿ ನೆರೆಯ ಬಾಂಗ್ಲಾ, ಬರ್ಮಾ, ನೇಪಾಳ, ಶ್ರೀಲಂಕಾ ಹಾಗೂ ಮಲೇಶಿಯಾ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಕಸ್ಟಂ ತೆರಿಗೆ ವಂಚಿಸಿ ಗಡಿಪ್ರದೇಶದಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳುತ್ತಿರುವುದರಿಂದ ಹಾಗೂ ಕೊಳೆರೋಗ ಮತ್ತು ಹಳದಿರೋಗಳಗಳಂತಹಾ ಮಾರಕ ರೋಗಗಳಿಗೆ ತುತ್ತಾಗಿ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆಗೆ ಬೆಲೆ ಕುಸಿಯುತ್ತಿದೆ. ಅಡಿಕೆ ಮಧ್ಯವರ್ತಿಗಳು ಕಸ್ಟಂ ತೆರಿಗೆ ವಂಚಿಸಿ ಮಾಡುತ್ತಿರುವ ಈ ಅಕ್ರಮ ಆಮದಿನಿಂದಾಗಿ ಕೇಂದ್ರ ಸರಕಾರಕ್ಕೆ ವರ್ಷಕ್ಕೆ ಸುಮಾರು ರೂ.5,000 ಕೋಟಿಗಿಂತಲೂ ಅಧಿಕ ನಷ್ಟ ಉಂಟಾಗುತ್ತಿದೆ.

ಆದುದರಿಂದ ವಿದೇಶಗಳಿಂದ ಆಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯ ಅಕ್ರಮ ಆಮದನ್ನು ತಡೆಯುವ ಕುರಿತು ಕೇಂದ್ರ ಸರಕಾರವು ವಿಶೇಷ ಗಮನಹರಿಸುವುದು ಹಾಗೂ ಈ ಬಗ್ಗೆ ವಿಶೇಷ ತನಿಖಾದಳವನ್ನು ನೇಮಿಸುವುದು ಅಲ್ಲದೇ ಭಾರತದಲ್ಲಿ ವಿದೇಶದಿಂದ ಅಕ್ರಮವಾಗಿ ಬರುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯನ್ನು ಸಂಪೂರ್ಣ ನಿಷೇಧಿಸುವಂತೆ ಹಾಗೂ ಸರಕಾರವು ಅಧಿಕೃತವಾಗಿ ಮಾಡಿಕೊಳ್ಳುತ್ತಿರುವ ಅಡಿಕೆ ಆಮದು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಸಂಸದರು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

Highslide for Wordpress Plugin