ಮಂಗಳೂರು: ಬಿಜೆಪಿ ಸಿದ್ದಾಂತ-ವಿಚಾರದಲ್ಲಿ ಹಾಗೂ ಪಕ್ಷದ ಶಿಸ್ತಿನಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ಸರ್ವ ವ್ಯಾಪಿ- ಸರ್ವ ಸ್ಪರ್ಶಿ ಬಿಜೆಪಿ ಬಲವರ್ಧನೆಯೇ ನನ್ನ ಗುರಿ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಭದ್ರಕೋಟೆಯ ಸೂತ್ರವನ್ನು ರಾಜ್ಯಾದ್ಯಂತ ಮತಗಟ್ಟೆ ಸಂಘಟನೆ ಸ್ವರೂಪದಲ್ಲಿ ಅನುಷ್ಠಾನಿಸಲಾಗುವುದು ಎಂದು ಬಿಜಿಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಳಿನ್ ಕುಮಾರ್ ಕಟೀಲ್ ಅವರು ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದು, ಕೊಡಿಯಾಲ್ ಬೈಲ್ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ನನಗೆ ಎಷ್ಟೇ ಎತ್ತರದ ಸ್ಥಾನ ಸಿಕ್ಕಿದ್ದರೂ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಪಾಲಿಗೆ ಕೇವಲ ಸಂಘದ ಸ್ವಯಂಸೇವಕನಾಗಿ, ಕಾರ್ಯಕರ್ತನಾಗಿಯೇ ಇರುತ್ತೇನೆ. ನಾನು ವಿದ್ವಾಂಸನಲ್ಲ, ನಾನು ಪಂಡಿತನಲ್ಲ, ನಾನು ಬರೀ ಸಂಘದ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ನನಗೆ ಪಕ್ಷ ಉನ್ನತ ಸ್ಥಾನ ನೀಡಿದೆ. ನಾನು ಅದನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದುನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು.
ವಾರದಲ್ಲಿ 6 ದಿನ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಪ್ರವಾಸ ಮಾಡಲಿದ್ದು, ವಾರದಲ್ಲಿ ಒಂದು ದಿನ ದಕ್ಷಿಣ ಕನ್ನಡದ ಅಭಿವೃದ್ಧಿ ಕಾರ್ಯದ ಪ್ರವಾಸ ಕೈಗೊಳ್ಳಲಾಗುವುದು. ಬಿಜೆಪಿಯಲ್ಲಿ ಹೋರಾಟಕ್ಕಾಗಿ ಸೀಟ್ ಸಿಗಲ್ಲ; ನಿಮ್ಮ ಕೆಲಸ ನೋಡಿ ಸೀಟ್ ಸಿಗಲಿದೆ ಎಂದು ಹೇಳಿದರು.
ರಾಜ್ಯದ ಬಂದರು ಮತ್ತು ಮೀನುಗಾರಿಕೆಯ ನೂತನ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಂಘಟನೆಯ ಸಾಮಾನ್ಯ ಪ್ರಚಾರಕರೊಬ್ಬರು ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ದಿಟಕ್ಕೂ ಹೆಮ್ಮೆಯ ಸಂಗತಿ. ನಾನು ನಳಿನ್ ಅವರನ್ನು ಕೆಲಸದ ಮೇಲೆ ಅವರಿಟ್ಟಿರುವ ಶೃದ್ಧೆಗಾಗಿ ಅಭಿನಂದಿಸುತ್ತೇನೆ. ನಮ್ಮ ಹಿರಿಯರು ಹಾಕಿಕೊಟ್ಟಿರುವ ಆದರ್ಶಗಳಿಗೆ ಹೊಂದಿಕೊಂಡು ನಳಿನ್ ಅವರಿಗೆ ಕೆಲಸ ಮಾಡಲು ಶಕ್ತಿ ಸಿಗಲಿ. ರಾಜ್ಯದಲ್ಲಿ ಮಹತ್ವದ ಹೆಜ್ಜೆಯನ್ನು ಇಡುವಂತಾಗಲಿ ಎಂದು ಹಾರೈಸಿದರು.