ಸಂಖ್ಯೆ ಎಂ.ಪಿ.ಡಿ.ಕೆ: 2593/2013-14
ದಿನಾಂಕ: 19-06-2013
ರಿಗೆ,
ಶ್ರೀ.ಮಲ್ಲಿಕಾರ್ಜುನ ಖರ್ಗೆ,
ಮಾನ್ಯ ರೈಲ್ವೇ ಸಚಿವರು,
ಭಾರತ ಸರಕಾರ,
ರೈಲು ಭವನ, ನವದೆಹಲಿ.
ಮಾನ್ಯರೇ,
ವಿಷಯ: ಕರಾವಳಿ ಕರ್ನಾಟಕಕ್ಕೆ ರೈಲ್ವೇ ಇಲಾಖೆಯ ಕುರಿತಾದ ಬೇಡಿಕೆಗಳು.
ಭಾರತ ಘನಸರಕಾರದ ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ತಮ್ಮನ್ನು ನನ್ನ ಕ್ಷೇತ್ರದ ಜನತೆಯ ಪರವಾಗಿ ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಕಳೆದ ನಾಲ್ಕು ವರ್ಷಗಳಿಂದ ಕರಾವಳಿ ಜನತೆಯ ರೈಲ್ವೇ ಇಲಾಖೆಯ ಬೇಡಿಕೆಗಳ ಕುರಿತಾಗಿ ಸರಕಾರದ ಗಮನವನ್ನು ಸೆಳೆದಿದ್ದರೂ ಹಲವು ಬೇಡಿಕೆಗಳು ಈಡೇರದೇ ಇರುವುದು ತುಂಬಾ ವಿಷಾದನೀಯ. ತಾವು ಅಧಿಕಾರವನ್ನು ಸ್ವೀಕರಿಸಿದ ಈ ಸಂದರ್ಭದಲ್ಲಿ ಕರಾವಳಿಯ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದರೊಂದಿಗೆ ಸಂಪೂರ್ಣ ಸಹಕಾರ ನೀಡುವಿರೆಂದು ಆಶಿಸುತ್ತೇನೆ.
2013-14 ರೈಲ್ವೇ ಬಜೆಟ್ ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ವಾರಕ್ಕೆ ಒಂದು ಬಾರಿ ಓಡಾಡುವ ರೈಲನ್ನು ಘೋಷಣೆ ಮಾಡಲಾಗಿರುತ್ತದೆ. ಈ ರೈಲು ಹಾಸನ ಜಿಲ್ಲೆಯ ಅರಸಿಕೆರೆಯ ಮೂಲಕ ಬೆಂಗಳೂರು-ಮಂಗಳೂರು ಮಧ್ಯೆ ಓಡಾಟ ನಡೆಸುವಂತೆ ವೇಳಾಪಟ್ಟಿ ರಚಿಸುವಂತೆ ಒತ್ತಾಯಿಸಲಾಗಿತ್ತು. ಆದರೆ ಈಗ ದೊರಕಿರುವ ಮಾಹಿತಿ ಹಾಗೂ ಪತ್ರಿಕಾ ವರದಿಯಂತೆ ಈ ರೈಲು ಬೆಂಗಳೂರು-ಬಂಗಾರುಪೇಟೆ-ಸೇಲಂ-ಕಣ್ಣೂರು ಮೂಲಕ ಮಂಗಳೂರು ಮದ್ಯೆ ಓಡಾಡಲಿದೆ. ನಮ್ಮ ಬೇಡಿಕೆಯಂತೆ ಈ ರೈಲನ್ನು ಅರಸಿಕೆರೆಯ ಮೂಲಕ ಮಂಗಳೂರಿಗೆ ಓಡಿಸದಿದ್ದಲ್ಲಿ ಕರಾವಳಿ ಕರ್ನಾಟಕದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ತೀವ್ರವಾಗಿ ಪ್ರತಿಭಟಿಸಬೇಕಾಗುತ್ತದೆ.
ಕರ್ನಾಟಕವು ರೈಲ್ವೇಯೊಂದಿಗೆ ದೇಶದಲ್ಲೇ ಅತೀ ಹೆಚ್ಚು ಪಾಲುದಾರಿಕೆ ಬಂಡವಾಳ ಹೂಡಿರುವ ಏಕೈಕ ರಾಜ್ಯವಾಗಿದ್ದು ಪ್ರತಿ ವರ್ಷ ನಿಗದಿತ ಸಮಯಕ್ಕೆ ಸಲ್ಲಿಸಲ್ಪಡುವ ಕರಾವಳಿ ಕರ್ನಾಟಕದ ರೈಲ್ವೇ ಬೇಡಿಕೆಗಳ ಬಗ್ಗೆ ನಿರಾಕರಣೆ ಮತ್ತು ನಿರ್ಲಕ್ಷ ಭಾವನೆ ತೋರುತ್ತಿರುವುದು ವಿಷಾದನಿಯ ಸಂಗತಿಯಾಗಿದೆ.
ಪ್ರತಿ ವರ್ಷ ಬಜೆಟ್ ಅಧಿವೇಶನದ ಚರ್ಚಾ ಅವದಿಯಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಕೇಳುವುದರ ಮೂಲಕ ಕರಾವಳಿ ಕರ್ನಾಟಕದ ಬೇಡಿಕೆಗಳನ್ನು ಎಲ್ಲರ ಗಮನಕ್ಕೆ ತರಲಾಗಿರುತ್ತದೆ.
ಪ್ರತಿ ವರ್ಷ ಕರ್ನಾಟಕದ ರಾಜಧಾನಿಯಿಂದ ಮತ್ತು ಇತರೆಡೆಗಳಿಂದ ಮಂಗಳೂರು ಸಂಪರ್ಕಿಸುವ ಹೊಸ ರೈಲುಗಳಿಗೆ ಬೇಡಿಕೆ ಇಟ್ಟಿದ್ದರೂ ಇಲಾಖೆ ಹಾಗೂ ಈ ವರೆಗಿನ ರೈಲ್ವೇ ಸಚಿವರು ಸರಿಯಾಗಿ ಸ್ಪಂದಿಸದಿರುವುದರಿಂದ ಜನ ಸಾಮಾನ್ಯರಿಗೆ ಅಸಮಾಧಾನ ಉಂಟಾಗಿರುತ್ತದೆ.
ಆದುದರಿಂದ ಈ ಎಲ್ಲಾ ಅಂಶಗಳನ್ನು ಗಮನಿಸಿ ಕರಾವಳಿ ಕರ್ನಾಟಕದ ಪ್ರಮುಖ ಬೇಡಿಕೆಗಳ ಬಗ್ಗೆ ತಾವು ವಿಶೇಷ ಗಮನ ಹರಿಸಬೇಕಾಗಿ ಈ ಮೂಲಕ ಕೋರುತ್ತೇನೆ.
ಕರಾವಳಿಯ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ:
1. ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗ ರಚನೆ ಮಾಡಿ ಹುಬ್ಬಳ್ಳಿ ರೈಲ್ವೇ ವಲಯದೊಂದಿಗೆ ಜೋಡಣೆ ಇಲ್ಲವೇ ಮಂಗಳೂರನ್ನು ಕೇರಳದಿಂದ ಪ್ರತ್ಯೇಕಿಸಿ ಮೈಸೂರು ರೈಲ್ವೇಗೆ ವಲಯಕ್ಕೆ ಸೇರ್ಪಡೆ ಮಾಡುವುದು.
2. ಮಂಗಳೂರು ರೈಲು ನಿಲ್ದಾಣವನ್ನು ವಿಶ್ವದರ್ಜೆ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸುವುದು.
3. ಮಂಗಳೂರು-ಬೆಂಗಳೂರು ನಡುವೆ ಅರಸೀಕೆರೆ ಮಾರ್ಗವಾಗಿ 2ನೇ ಹೊಸ ರಾತ್ರಿ ರೈಲು.
4. ಕಾರವಾರ – ಯಶವಂತಪುರ ಹಗಲು ರೈಲನ್ನು ಪ್ರತಿ ದಿನ ಓಡಿಸುವುದು.
5. ಸುಬ್ರಹ್ಮಣ್ಯ ರೈಲು ನಿಲ್ದಾಣವನ್ನು ಪ್ರಾಥಮಿಕ ಸೌಲಭ್ಯ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸುವುದು.
6. ಕರಾವಳಿ ಮಂಗಳೂರು, ಉಡುಪಿಗೆ ಹೆಚ್ಚು ಹೆಚ್ಚು ಹೊಸ ರೈಲುಗಳ ಬೇಡಿಕೆ.
7. ಚೆರ್ವತ್ತೂರು-ಮಂಗಳೂರು ಪ್ಯಾಸೆಂಜರ್ (56661)ರೈಲು ಮತ್ತು ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಪ್ರತಿ ದಿನ 8.30 ಕ್ಕೆ ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಆಗಮಿಸುವುದು.
8. ಕಬಕ-ಪುತ್ತೂರು ರೈಲನ್ನು ರಾತ್ರಿ ಸುಬ್ರಹ್ಮಣ್ಯದ ವರೆಗೆ ವಿಸ್ತರಿಸುವುದರೊಂದಿಗೆ ಕಾಣಿಯೂರು, ಎಡಮಂಗಲ, ಸುಬ್ರಹ್ಮಣ್ಯ ಪ್ರದೇಶದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದು.
9. ಮಂಗಳೂರು-ಸುಬ್ರಹ್ಮಣ್ಯ ನಡುವೆ ದ್ವಿಪಥ ಹಳಿ ನಿರ್ಮಾಣ.
10. ನೇರಳಕಟ್ಟೆಯಲ್ಲಿ ಪ್ಯಾಸೆಂಜರ್ ರೈಲಿಗೆ ನಿಲುಗಡೆ ಮತ್ತು ಮೇಲ್ಸೇತುವೆ ಕಾಲುದಾರಿ ನಿರ್ಮಾಣ.
11. ಬಂಟ್ವಾಳ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಛಾವಣಿ ಮತ್ತು 2ನೇ ಪ್ಲಾಟ್ ಫಾರ್ಮ್ ನಿರ್ಮಾಣದೊಂದಿಗೆ ಮೇಲ್ಸೇತುವೆ ಕಾಲುದಾರಿ.
12. ಕಬಕಪುತ್ತೂರು ನಿಲ್ದಾಣದ ಆದರ್ಶ ನಿಲ್ದಾಣ ಕಾಮಗಾರಿ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ನಳಿನ್ ಕುಮಾರ್ ಕಟೀಲ್