ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿ ನೂತನವಾಗಿ ಆಯ್ಕೆಯಾಗಿರುವ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಕರಾವಳಿ ಕರ್ನಾಟಕ ಹೆದ್ದಾರಿ ಬೇಡಿಕೆಗಳ ಕುರಿತು ಪತ್ರ ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್-ಸುರತ್ಕಲ್ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:75(48)ನ ಚತುಷ್ಟ್ಪತಗೊಳಿಸುವ ಕಾಮಗಾರಿಯು ಪ್ರಾರಂಭವಾಗಿ ಸುಮಾರು ಏಳು ವರ್ಷಗಳು ಕಳೆದರು ಆದರೂ ಈ ರಸ್ತೆಯು ಇದು ವರೆಗೂ ಪೂರ್ಣಗೊಂಡಿಲ್ಲ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಹೆದ್ದಾರಿ ಇಲಾಖೆಯನ್ನು ಬೇಡಿಕೊಂಡರೂ ಸಮಸ್ಯೆಗಳು ಬಗೆಹರಿದಿಲ್ಲ. ಆದ್ದರಿಂದ ಈ ಬಾರಿಯಾದರು ಇತ್ತ ಕಡೆ ಆಸ್ಕರ್ ಅವರು ಗಮನ ನೀಡಬೇಕೆಂದು ನಳಿನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ: 75(48)ಯ ಚತುಷ್ಟ್ಪತ ಕಾಮಗಾರಿಯ ಭಾಗವಾಗಿರುವ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು ಇನ್ನೂ ಪೂರ್ಣಗೊಂಡಿರುವುದಿಲ್ಲ. ಇದರಿಂದಾಗಿ ಈ ಭಾಗದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿರುತ್ತಾರೆ ಅಲ್ಲದೇ ಪ್ರತಿನಿತ್ಯ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿ 66 (17) ಹಾಗೂ ರಾಷ್ಟ್ರೀಯ ಹೆದ್ದಾರಿ 169 (13) ಸೇರುವ ನಂತೂರು ಜಂಕ್ಷನ್ ನಲ್ಲಿ ಒಂದು ಮೇಲ್ಸೇತುವೆ ಅತೀಅವಶ್ಯವಿರುತ್ತದೆ. ಈ ಪ್ರದೇಶದಲ್ಲಿ ವಾಹನದಟ್ಟಣೆ ಮಿತಿಮೀರಿದ್ದು ಇದರಿಂದಾಗಿ ನಿತ್ಯ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇಲ್ಲಿ ಒಂದು ಮೇಲ್ಸೇತುವೆ ನಿರ್ಮಿಸ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಕೋರಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನ ಜಿಲ್ಲೆಯ ಗಡಿಭಾಗದಲ್ಲಿರುವ ಶಿರಾಡಿ ಘಾಟಿಯಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ಸಂಚಾರವು ದುಸ್ಥರವಾಗಿರು ತ್ತದೆ. ಭಾರೀಗಾತ್ರದ ವಾಹನಗಳು ಈ ಘಾಟಿಯ ಮೂಲಕ ಸಂಚರಿಸುವುದರಿಂದ ಆಗಿಂದಾಗ್ಯೆ ಅಪಘಾತಗಳು ಉಂಟಾಗುತ್ತಿದ್ದು ವಾಹನ ಸಂಚಾರದಲ್ಲಿ ತುಂಬಾ ವ್ಯತ್ಯಯವಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಈಗಾಗಲೇ ಹಲವಾರು ಬಾರಿ ಕೇಂದ್ರ ಸರಕಾರವನ್ನು ಕೇಳಿಕೊಂಡರೂ ಈವರೆಗಿನ ಸಚಿವರು ಸರಿಯಾಗಿ ಸ್ಪಂದಿಸದಿರುವುದರಿಂದ ಸಾರ್ವಜನಿಕರು ತುಂಬಾ ನೊಂದಿದ್ದು ಇತ್ತ ಕಡೆ ಗಮನ ನೀಡಬೇಕೆಂದು ನಳಿನ್ ತಿಳಿಸಿದ್ದಾರೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಹಿಂದಿನ ರಾಜ್ಯ ಸರಕಾರವು ಒಂದು ಸುರಂಗಮಾರ್ಗ ನಿರ್ಮಿಸುವ ಬಗ್ಗೆ ಯೋಚಿಸಿದ್ದು ಈ ಸುರಂಗ ಮಾರ್ಗ ನಿರ್ಮಿಸಿದ್ದಲ್ಲಿ ಮಂಗಳೂರು-ಬೆಂಗಳೂರು ನಡುವಿನ ದೂರವು ಸುಮಾರು 100 ಕಿ.ಮೀ ಕಡಿತಗೊಳ್ಳಲಿದೆ. ಇದರಿಂದ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣದ ಸಮಯ ಅಲ್ಲದೇ ಮುಖ್ಯವಾಗಿ ಅಪಾರ ಪ್ರಮಾಣದ ಇಂಧನದ ಉಳಿತಾಯ ಮಾಡಬಹುದಾಗಿದೆ. ಈ ಸುರಂಗಮಾರ್ಗ ನಿರ್ಮಿಸುವ ಬಗ್ಗೆ ಬೇಡಿಕೊಳ್ಳವುದಾಗಿ ನಳಿನ್ ಆಸ್ಕರ್ ಫೆರ್ನಾಂಡಿಸ್ ಅವರಿಗೆ ತಿಳಿಸಿದ್ದಾರೆ.