Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕೃಷಿಕರಿಗೆ ವಿಶೇಷ ಪ್ಯಾಕೇಜ್‌ಗಾಗಿ ಹೋರಾಟ : ನಳಿನ್ ಕುಮಾರ್

ಮಂಗಳೂರು :ಅಡಿಕೆ ಕೊಳೆ ರೋಗ ಹಾಗೂ ಹಳದಿ ರೋಗಗಳಿಂದ ಅಡಿಕೆ ಕೃಷಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದು, ಕೇಂದ್ರ ಸರಕಾರ ತಕ್ಷಣ ‘ವಿಶೇಷ ಪ್ಯಾಕೇಜ್’ ಪ್ರಕಟಿಸಿ ರೈತರ ನೆರವಿಗೆ ಬರಬೇಕು. ಕೇಂದ್ರ ಇದಕ್ಕೆ ತಕ್ಷಣ ಸ್ಪಂದಿಸದಿದ್ದರೆ ಕರಾವಳಿಯ ರೈತರನ್ನು ಸಂಘಟಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರಕಾರ ರೈತ ಪರವಾದ ಭಾಷಣಗಳನ್ನು ಮಾಡುವುದರಿಂದ ಅಡಿಕೆ ಕೃಷಿ ಕಾರರ ಸಮಸ್ಯೆ ಪರಿಹಾರವಾಗದು. ರೈತರು ಸಂಕಷ್ಟಕ್ಕೀಡಾದಾಗ ಅವರಿಗೆ ಸಕಾಲದಲ್ಲಿ ನೆರವಿನ ಅಗತ್ಯವಿದೆ. ಇದಕ್ಕಾಗಿ ಕೇಂದ್ರ ಸರಕಾರ ಆರ್ಥಿಕ ನೆರವು ಒದಗಿಸುವುದಕ್ಕಾಗಿ ಪ್ರತ್ಯೇಕವಾದ “ವಿಶೇಷ ಪ್ಯಾಕೇಜ್’ನ್ನು ರೂಪಿಸಬೇಕು. ಈ ಪ್ಯಾಕೇಜ್‌ನ ಮೂಲಕ ರಾಜ್ಯದ ಅಡಿಕೆ ಬೆಳೆಗಾರರನ್ನು ಸಂಕಷ್ಟದಿಂದ ಪಾರುಮಾಡಬೇಕು ಎಂದು ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.

ಅಡಿಕೆ ಕೃಷಿಕರು ಸಾಲ ಪಡೆದು ಬೆಳೆಸಿದ ಅಡಿಕೆ ಕೃಷಿ, ಕೊಳೆ ರೋಗ ಹಾಗೂ ಹಳದಿ ರೋಗದಿಂದ ಸಂಪೂರ್ಣ ನಾಶವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ರೈತರ ಸಂಕಷ್ಟಗಳಿಗೆ ಸಮರ್ಪಕ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಇದರಿಂದ ರೈತರ ಕಂಗೆಟ್ಟಿದ್ದಾರೆ. ಅವರಿಗೆ ಆರ್ಥಿಕ ನೆರವು ನೀಡಿ, ಧೈರ್ಯ ತುಂಬುವ ಕೆಲಸವನ್ನು ಸರಕಾರ ಮಾಡದಿದ್ದರೆ, ತೀವ್ರ ರೀತಿಯಲ್ಲಿ ಹೋರಾಟ ಮಾಡುವುದು ಅನಿವಾರ್ಯ. ರೈತರ ಬೇಡಿಕೆಗಳಿಗೆ ಸಾಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ನೀಡದಿದ್ದರೆ, ಬಿಜೆಪಿ ನೇತೃತ್ವದಲ್ಲಿ ರೈತರನ್ನು ಒಟ್ಟು ಸೇರಿಸಿ, ಸರಕಾರದ ವಿರುದ್ಧ ಬೃಹತ್ ಹೋರಾಟ ನಡೆಸುತ್ತೇವೆ. ರೈತರ ಏಳಿಗೆಗಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧ ಎಂದು ನಳಿನ್ ಕುಮಾರ್ ಕಟೀಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Highslide for Wordpress Plugin