Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕುದ್ಮುಲ್ ರಂಗರಾವ್ ಸಮಾಜ ಪರಿವರ್ತನೆಯ ಹರಿಕಾರರು: ನಳಿನ್

ಮಂಗಳೂರು: ಶಿಕ್ಷಣದಿಂದ ಮಾತ್ರ ಈ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯ ಎಂದು ಶಿಕ್ಷಣಕ್ಕೆ ವಿಶೇಷ ಪ್ರಾಧಾನ್ಯತೆ ನೀಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಗ್ರ ಅಭಿವೃದ್ಧಿಯ ಚಿಂತನೆ ಕಂಡ ಕುದ್ಮುಲ್ ರಂಗರಾವ್ ಸಮಾಜ ಪರಿವರ್ತನೆಯ ಹರಿಕಾರರು ಎಂದು ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಅಖಿಲ ಭಾರತ ಮುಂಡಾಲ ಯುವ ವೇದಿಕೆ ವತಿಯಿಂದ ಕುದ್ಮುಲ್ ರಂಗರಾವ್ ಅವರ 154ನೇ ಜನ್ಮ ದಿನಾಚರಣೆಯ ಅಂಗವಾಗಿ ಭಾನುವಾರ ನಗರದ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಬದುಕಿನುದ್ದಕ್ಕೂ ಹೋರಾಡಿದ ಅವರು ದೀನ ದಲಿತರ ಧ್ವನಿಯಾಗಿದ್ದರು. ವರ್ಣಾಶ್ರಮ ಪದ್ಧತಿಯ ವಿರುದ್ಧ ಹೋರಾಡುತ್ತ ಗಾಂಧಿ ತತ್ವವನ್ನು ನಿಜವಾಗಿಯೂ ಅನುಷ್ಠಾನಗೊಳಿಸಿದವರು. ಅವರ ಆದರ್ಶವನ್ನು ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಅಂದಿನ ಸಾಮಾಜಿಕ ಪರಿಸ್ಥಿತಿಯ ವಿರುದ್ಧ ಹೋರಾಡಿದ ರಂಗರಾವ್ ಅವರು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾದವರು. ಬಡ ಜನರ ಕಣ್ಣೀರು ಒರೆಸಿದ ಕೆಲಸ ಮಾಡಿದ ಅವರನ್ನು ಸಮಾಜ ಎಂದೂ ಮರೆಯದು. ವಿದ್ಯಾರ್ಥಿಗಳು ಅವರ ಆದರ್ಶವನ್ನು ಪಾಲಿಸುವುದರೊಂದಿಗೆ ದೇಶದ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದರು.

ಇದೇ ಸಂದರ್ಭ ಕುದ್ಮುಲ್ ರಂಗರಾವ್ ರಾಷ್ಟ್ರೀಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಮುಗಳವಳ್ಳಿ ಕೇಶವ ಧರಣಿಯವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಶಾಸಕರಾದ ಜೆ.ಆರ್.ಲೋಬೋ, ಮೊಯ್ದೀನ್ ಬಾವಾ, ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ರಜನೀಶ್ ಕಾಪಿಕಾಡ್, ನೇತ್ರ ಚಿಕಿತ್ಸಾ ತಜ್ಞ ಡಾ.ಪ್ರೇಮದಾಸ್ ಮುಖ್ಯ ಅತಿಥಿಗಳಾಗಿದ್ದರು. ಮುಂಡಾಲ ಯುವವೇದಿಕೆಯ ಪ್ರಧಾನ ಕಾರ್ಯದರ್ಶಿ ರಘುವೀರ್ ಜೆ ಸ್ವಾಗತಿಸಿದರು. ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin