Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಗೇಣಿ ಜಮೀನುಗಳನ್ನು ನವೀಕರಿಸುವಂತೆ ಅಥವಾ ಶಾಶ್ವತವಾಗಿ ಮಂಜೂರು ಮಾಡುವಂತೆ ಸಚಿವರಿಗೆ ಮನವಿ

ನವದೆಹಲಿ: ದಕ್ಷಿಣ ಕನ್ನಡ ಸಂಸದ  ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಡಾ. ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಮದ್ರಾಸ್ ಅರಣ್ಯ ಅಧಿನಿಯಮ 1882/ನಿಯಮಗಳು ಹಾಗೂ ಮದ್ರಾಸ್ ಅರಣ್ಯ ಸಂಹಿತೆಯಂತೆ ಮಂಜೂರಾದ ಗೇಣಿ ಜಮೀನುಗಳನ್ನು ನವೀಕರಿಸುವಂತೆ ಅಥವಾ ಶಾಶ್ವತವಾಗಿ ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.

ಈ ಹಿಂದೆ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಾರಂಪರಿಕ ಕೃಷಿಕರಾಗಿರುತ್ತಾರೆ. ಜಿಲ್ಲೆಯ ಇತರ ತಾಲೂಕುಗಳಲ್ಲಿ ಸರಕಾರ ಕೃಷಿ ಉದ್ದೇಶಕ್ಕೆ ಅರಣ್ಯ ಜಮೀನು ಮಂಜೂರು ಮಾಡಿದ್ದು ಗೇಣಿ ಮಂಜೂರಾತಿ ಷರತ್ತಿನಂತೆ ಕೃಷಿ ಮಾಡಿರುತ್ತಾರೆ.

with Harshavardhan

ಗೇಣಿ ಷರತ್ತುಗಳ ಪ್ರಕಾರ ಅಡಿಕೆ, ತೆಂಗು, ಬಾಳೆ ಇತ್ಯಾದಿ ಕೃಷಿ ಮಾಡಿದ್ದು ಯಾವುದೇ ರೀತಿಯಲ್ಲಿ ಷರತ್ತುಗಳ ಉಲ್ಲಂಘನೆಯಾಗಿರುವುದಿಲ್ಲ. ಗೇಣಿದಾರರಿಗೆ ಕೇವಲ 2 ರಿಂದ 10 ಹೆಕ್ಟೇರ್ ವಿಸ್ತೀರ್ಣದ ಮಿತಿಯ ಒಳಗಾಗಿಯೇ ಗೇಣಿ ಭೂಮಿ ಮಂಜೂರಾಗಿರುತ್ತದೆ. ಪ್ರಸಕ್ತ ಎಲ್ಲಾ ಗೇಣಿ ಅವಧಿಯು ಮುಗಿದಿರುತ್ತದೆ.

ಪಾರಂಪರಿಕವಾಗಿ ಕೃಷಿಯನ್ನೇ ಜೀವನಾಧಾರವಾಗಿಸಿ- ಕೊಂಡಿರುವ ಕೃಷಿಕರು ಸರಕಾರಿ/ಅರೆಸರಕಾರಿ ಸಂಸ್ಥೆ/ಬ್ಯಾಂಕ್­ಗಳಿಂದ ಪಡಕೊಂಡ ಸಾಲಗಳಿಂದ ಕೃಷಿ ಜಮೀನು ಅಭಿವೃದ್ಧಿಪಡಿಸಿ ಇದೀಗ ಅತಂತ್ರ ಪರೀಸ್ಥಿತಿಯಲ್ಲಿ ಕಾಲ ಕಳೆಯುವಂತಾಗಿರುತ್ತದೆ. ಹೆಚ್ಚಿನ ಗೇಣಿ ಜಮೀನುಗಳಿಗೆ ಸಂಬಂಧಿಸಿದಂತೆ ಮೂಲ ಮಂಜೂರಾತಿ ಪಡೆದ ಗೇಣಿದಾರರು ಮೃತಪಟ್ಟಿದ್ದು ಅವರ ಕುಟುಂಬದ 3 ನೇ ಅಥವಾ 4 ನೇ ತಲೆಮಾರಿನ ವಂಶಸ್ಥರು ಜಮೀನುಗಳಲ್ಲಿ ಕೃಷಿ ಮಾಡಿ ಜೀವನ ಸಾಗಿರುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ‘ಸಿ’ ರಾಜ್ಯವಾಗಿದ್ದ ಕೊಡಗಿನಲ್ಲಿ ಸರಕಾರವು ಅರಣ್ಯ ಭೂಮಿಯಲ್ಲಿ ಮಂಜೂರು ಮಾಡಿರುವ ಜುಮ್ಮಾಮಲೈ ಶಾಶ್ವತ ಗೇಣಿ ಮಂಜೂರಾತಿಗಳನ್ನು ಕರ್ನಾಟಕ ಅರಣ್ಯ ಕಾಯ್ದೆಯ ನಿಯಮಗಳಂತೆ ಮಾನ್ಯ ಮಾಡಿರುವುದು ಕಂಡುಬರುತ್ತದೆ.

ಆದುದರಿಂದ ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯನ್ನು ಗೇಣಿ ನೆಲೆಯಲ್ಲಿ ಪಡೆದುಕೊಂಡಿರುವ ಪಾರಂಪರಿಕವಾಗಿ ಕೃಷಿಕರಿಗೆ ಕಾನೂನಿನಡಿಯಲ್ಲಿ ಸರಕಾರದಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವರಿಕೆ ಮಾಡಿದರು.

ಸಂಸದರ ಮನವಿಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೃಷಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ಸಂಸದರು ತಿಳಿಸಿರುತ್ತಾರೆ.

Highslide for Wordpress Plugin