ಬಂಟ್ವಾಳ: ದೇಶದಲ್ಲಿ ಆರ್ಥಿಕ ಹಿನ್ನೆಡೆ ಜೊತೆಗೆ ಭದ್ರತೆಗೂ ತೀವ್ರ ಆತಂಕ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಕಿತ್ತೊಗೆದು, ಯುವಶಕ್ತಿ ಆಶಾಕಿರಣವಾಗಿ ಮೂಡಿ ಬಂದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿ ಪ್ರಧಾನಿಯನ್ನಾಗಿ ಮಾಡುವಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ತಾಲೂಕಿನ ರಾಯಿ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯಾಲಯಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಕಾರ್ಯದರ್ಶಿ ದೇವಪ್ಪ ಪೂಜಾರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ ಭಟ್, ಅಲ್ಪಸಂಖ್ಯಾತ ಘಟಕ ಮುಖಂಡ ರಝಾಕ್, ಸ್ಥಾನೀಯ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ರಾಘವ ಅಮೀನ್, ಪ್ರಭಾಕರ ಪೂಜಾರಿ, ಚಂದ್ರಶೇಖರ ಗೌಡ ಮತ್ತಿತರರು ಇದ್ದರು.
ಇದಕ್ಕೂ ಮೊದಲು ಸಂಸದ ನಳಿನ್ ಕುಮಾರ್ ಕಟೀಲ್ ರವರು ಕರಿಯಂಗಳ, ಅಮ್ಮುಂಜೆ, ಪೊಳಲಿ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಟಾಡಿಯ ನಲ್ಕೆಮಾರು, ಸಿದ್ದಕಟ್ಟೆ ಪರಿಸಿರದ ನಾಲ್ಕು ಗ್ರಾಮಗಳು, ನರಿಕೊಂಬು, ಶಂಭೂರು, ಬರಿಮಾರು, ಸಜೀಪಮೂಡ, ಸಜೀಪನಡು ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಭೇಟಿಮಾಡಿ ಚರ್ಚಿಸಿದರು. ಈ ಸಂದರ್ಭದಲ್ಲಿ ಆಯಾ ಗ್ರಾಮದ ಪಕ್ಷದ ಸ್ಥಾನೀಯ ಅಧ್ಯಕ್ಷರುಗಳು, ಮುಖಂಡರು ಉಪಸ್ಥಿತರಿದ್ದರು.