ಮಂಗಳೂರು : ಸ್ವಾಮಿ ವಿವೇಕಾನಂದರ 150 ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಬುಧವಾರ 2-10-2013 ರಂದು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನ್ಯೂಸ್ 13 ಹಾಗೂ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಆಯೋಜಿಸಿದ‘ವಿವೇಕ ದೃಷ್ಟಿಗಾಗಿ-ದೃಷ್ಟಿದಾನ’ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ನೇತ್ರದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಒಟ್ಟು 372 ಮಂದಿ ನೇತ್ರದಾನ ಮಾಡುವ ಮೂಲಕ ಉತ್ತಮ ಸ್ಪಂದನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ‘ಸಂತನಾಗಿ, ರಾಷ್ಟ್ರಭಕ್ತನಾಗಿ ಜಗತ್ತಿನಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ ವಿವೇಕಾನಂದರ ಹಾಗೂ ದೇಶದ ಹೆಮ್ಮೆಯ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬ ಈ ಎರಡು ಮಹಾನ್ ಶಕ್ತಿಯನ್ನು ನೆನಪಿಸುವ ಕಾರ್ಯ ಶ್ರೀರಾಮ ವಿದ್ಯಾಕೇಂದ್ರ ಹಾಗೂ ನ್ಯೂಸ್ 13 ಮಾಡಿದೆ. ದರಿದ್ರ ನಾರಾಯಣೋ ದೇವೋ ಭವ ಇದಕ್ಕೆ ಅಕ್ಷರ ರೂಪ ನೀಡುವ ಕಾರ್ಯ ದೃಷ್ಟಿದಾನದ ಮೂಲಕ ಆಗಿದೆ ಎಂದ ಸಂಸದ ನಳಿನ್ ‘ಇಂದು ನಾನೂ ದೃಷ್ಟಿದಾನ ಮಾಡುತ್ತೇನೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ‘ಹಲವರು ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಮಾತ್ರ ಚಿಂತಿಸುತ್ತಾರೆ, ಇದಕ್ಕಿಂತಲೂ ತುಸು ಮುಂದೆ ಹೋಗಿ ವ್ಯಕ್ತಿಯೊಬ್ಬ ಏನಾದರೂ ಮಾಡಿದರೆ ಇಡೀ ಸಮಾಜವೇ ಆತನನ್ನು ನೆನಪಿಟ್ಟುಕೊಳ್ಳುತ್ತದೆ, ಅಷ್ಟೇ ಅಲ್ಲದೇ ಆತನಿಗೂ ಜೀವನ ಸಾರ್ಥಕ್ಯದ ಧನ್ಯತೆ ಬರುತ್ತದೆ. ದೃಷ್ಟಿದಾನ ಮಾಡಿದಾಗ ಸಿಗುವ ಖುಷಿ. ಸಂತೋಷದ ಅನುಭವ ನಮಗೆ ಕತ್ತಲೆಯಲ್ಲಿ ನಡೆದಾಗ ತಿಳಿಯುತ್ತದೆ, ಕತ್ತಲೆಯಲ್ಲಿ ನಾವಿದ್ದಾಗ ಸ್ವಲ್ಪ ಬೆಳಕು ಬೇಕು ಎಂದು ನಮಗನಿಸುತ್ತದೆ ಎಂದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ದಿವ್ಯಲಕ್ಷ್ಮೀಯವರು ನೇತ್ರದಾನದ ಮಹತ್ವವನ್ನು ತಿಳಿಸಿದರು. ನೇತ್ರದಾನ ಮಾಡಿದ ವ್ಯಕ್ತಿಯು ಮರಣ ಹೊಂದಿದ 6 ಗಂಟೆಯೊಳಗೆ ಅವರ ಹತ್ತಿರದ ಸಂಬಂಧಿಗಳು ಹತ್ತಿರದ ‘ಐ ಬ್ಯಾಂಕ್’ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದರು.
ನ್ಯೂಸ್ 13 ಮುಖ್ಯಸ್ಥ ಸುನೀಲ್ ಕುಲಕರ್ಣಿ ಪ್ರಾಸ್ತಾವಿಕ ಭಾಷಣ ಮಾಡಿದರೆ, ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಡಾ.ಹೃಷಿಕೇಶ ಅಮೀನ್, ನಾರಾಯಣ ಸೋಮಯಾಜಿ, ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.
Photos: