Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ರಾಜ್ಯ ಸರಕಾರದಿಂದ ಜನಸಾಮಾನ್ಯರ ಮೇಲೆ ಸವಾರಿ : ನಳಿನ್

ಮಂಗಳೂರು :ಕೆಎಸ್‌ಆರ್‌ಟಿಸಿ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಪ್ರಯಾಣ ದರ ಹೆಚ್ಚಳ ಸೇರಿದಂತೆ ನಾನಾ ಜನವಿರೋಧಿ ವಿಚಾರಗಳ ಮೂಲಕ ಜನಸಾಮಾನ್ಯರ ಮೇಲೆ ಸವಾರಿ ಮಾಡಲು ರಾಜ್ಯ ಸರಕಾರ ಆರಂಭಿಸಿದ್ದು, ಇಂತಹ ನೀತಿ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಪ್ರಯಾಣ ದರ ಸರಾಸರಿ ಶೇ.10.50, ಬಿಎಂಟಿಸಿ ಪ್ರಯಾಣ ದರ ಅತ್ಯಧಿಕ ಪ್ರಮಾಣದಲ್ಲಿ ಅಂದರೆ ಶೇ.೧೬ರಷ್ಟು ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಜನಸಾಮಾನ್ಯರು ಅದರಲ್ಲೂ ಗ್ರಾಮೀಣ ಪ್ರದೇಶದ ಬಡವರು ನಿತ್ಯ ಪ್ರಯಾಣಕ್ಕೆ ಕೆಎಸ್‌ಆರ್‌ಸಿಟಿಯನ್ನು ನಂಬಿಕೊಂಡಿದ್ದಾರೆ. ಇದರ ಜತೆಗೆ ಬೆಂಗಳೂರಿನಲ್ಲಿ ಕಾರ್ಮಿಕ ವರ್ಗದವರು ಬಿಎಂಟಿಸಿಯನ್ನು ನೆಚ್ಚಿಕೊಂಡಿದ್ದಾರೆ. ಇದರ ದರ ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದರ ಜತೆಗೆ ನಿರಂತರ ಪೆಟ್ರೋಲ್ ದರ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್ ದರ ಏರಿಕೆಯಾದ ತಕ್ಷಣ ಎಲ್ಲಾ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ತೀವ್ರ ಸಂಕಷ್ಟ ಪಡುವಂತಾಗುತ್ತಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸುವ ಸರಕಾರ, ಅದನ್ನು ಮಾಡುವುದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸೂಕ್ತ ಸೌಲಭ್ಯಗಳಿಲ್ಲದೆ ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡು, ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಶ್ರೀ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.

Highslide for Wordpress Plugin