ಬಂಟ್ವಾಳ: ಕಳಂಕಿತ ಜನಪ್ರತಿನಿಧಿಗಳನ್ನು ಚುನಾವಣೆಗೆ ನಿಲ್ಲಿಸುವ ಪರವಾಗಿ ಸುಗ್ರಿವಾಜ್ಞೆಯನ್ನು ಹೊರಡಿಸಲು ಹೋಗಿ ಮುಖಭಂಗಕ್ಕೀಡಾದ ಕೇಂದ್ರ ಸರಕಾರ ಅದನ್ನು ತಡೆಹಿಡಿಯಬೇಕೆಂದು ರಾಜಕೀಯ ನಾಟಕವಾಡಿದ ಯುವರಾಜ ರಾಹುಲ್ ಗಾಂಧಿಯ ಮುಂದೆ ಮಂಡಿಯೂರಿ ಆ ಸುಗ್ರಿವಾಜ್ಞೆಯನ್ನು ಹಿಂದಕ್ಕೆ ಪಡೆದುಕೊಂಡು ನಗೆಪಾಟಲಿಗೀಡಾಗಿದೆ. ದೇಶದ ಪ್ರಧಾನಿ ಅತ್ಯುನ್ನತ ಅಧಿಕಾರ ಹೊಂದಿರುವ ಸಚಿವ ಸಂಪುಟವನ್ನೇ ಹೈಜಾಕ್ ಮಾಡಿ ಇವರೆಲ್ಲರಿಗಿಂತ ಗಾಂಧಿ ಮನೆತನದ ಒರ್ವ ಸಂಸದ ಶ್ರೇಷ್ಠ ಎನ್ನುವುದನ್ನು ದೇಶಕ್ಕೆ ತೋರಿಸಿಕೊಟ್ಟಿರುವುದು ನಾಚಿಕೆಗೇಡು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
ಅವರು ಬಿ.ಸಿರೋಡಿನ ಶಿವಳ್ಳಿ ಸಭಾಭವನದಲ್ಲಿ ಗುರುವಾರ ಬಂಟ್ವಾಳ ಬಿ.ಜೆ.ಪಿ.ಕ್ಷೇತ್ರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭ್ರಷ್ಟಾಚಾರದಿಂದ ಮುಳುಗಿರುವ ಕೇಂದ್ರ ಸರಕಾರ ಕೆಲಸ ಮಾಡುವುದನ್ನೇ ನಿಲ್ಲಿಸಿದೆ. ಜೀವರಕ್ಷಕ ವ್ಯವಸ್ಥೆಯಲ್ಲಿ ಸರ್ಕಾರ ಉಸಿರಾಡುತ್ತಿದೆ. ದೇಶದ ಪ್ರಧಾನಿ ಅತ್ಯಂತ ದಯನೀಯ ಸ್ಥಿತಿಯಲ್ಲಿರುವುದನ್ನು ನೋಡಿದಾಗ ಅಯ್ಯೋ ಪಾಪ ಅನ್ನಿಸುತ್ತದೆ ಎಂದು ವ್ಯಂಗವಾಡಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಬಂಟ್ವಾಳ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಪಕ್ಷದ ಮುಖಂಡರಾದ ದೇವದಾಸ ಶೆಟ್ಟಿ, ಸಂಜೀವ ಮಠಂದೂರು, ಚೆನ್ನಪ್ಪ ಕೊಟ್ಯಾನ್, ಶಾರದ ರೈ, ರಾಜೇಶ್ ನಾಯಕ್, ನಾಗರಾಜ ಶೆಟ್ಟಿ, ಚಂದ್ರಹಾಸ ಉಳ್ಳಾಲ್, ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಸ್ವಾಗತಿಸಿ, ತಾ.ಪಂ.ಸದಸ್ಯ ದಿನೇಶ್ ಅಮ್ಟೂರು ವಂದಿಸಿದರು. ಆನಂದ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.