ಮಂಗಳೂರು: ನಗರದಲ್ಲಿರುವ ಹಲವು ವಿದ್ಯಾರ್ಥಿ ವಸತಿ ನಿಲಯಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ರಾತ್ರಿ ದಿಢೀರ್ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿಯವರೊಂದಿಗೆ ಆಗಮಿಸಿದ ನಳಿನ್ ಮೊದಲು ಉಜ್ಜೋಡಿಯಲ್ಲಿರುವ ಐಟಿಡಿಪಿ ಇಲಾಖೆ ನಡೆಸುತ್ತಿರುವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದರು, ಈ ಸಂದರ್ಭ ಅವರಿಗೆ ಅಲ್ಲಿನ ದುರಾವಸ್ಥೆಗಳ ದರ್ಶನವಾಗಿದೆ.
ವಿದ್ಯಾರ್ಥಿಗಳು ಸಂಸದರಿಗೆ ಈ ಬಗ್ಗೆ ದೂರು ನೀಡಿದ್ದು, ಅಲ್ಲಿನ ಕಿರಿದಾದ ಕೊಠಡಿ, ಒಂದೇ ಕೊಠಡಿಯಲ್ಲಿ ನಾಲ್ಕೈದು ಜನರ ವಾಸ, ಕೊಳೆತು ನಾರುವ ಅಡುಗೆ ಮನೆ, ಕೆಟ್ಟ ಆಹಾರದ ಬಗ್ಗೆ ಮಾಹಿತಿ ನೀಡಿದರು
ಹಾಸ್ಟೆಲ್‌ಗೆ ಸರಿಯಾಗಿ ನೀರು ಬರುತ್ತಿಲ್ಲ, ಕಟ್ಟಡದ ಮಾಲೀಕರು ಕಟ್ಟಡಕ್ಕೆ ಬೇಕಾದ ಮೂಲಸೌಕರ್ಯ ಒದಗಿಸುತ್ತಿಲ್ಲ, ಕಟ್ಡದ ಕೆಳಗೆ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ, ಇದರ ವಾಸನೆ ಒಂದೆಡೆಯಾದರೆ ಪಕ್ಕದಲ್ಲೇ ಹೆದ್ದಾರಿ ಇರುವ ಕಾರಣ ವಾಹನಗಳ ಶಬ್ದ ವಿದ್ಯಾರ್ಥಿಗಳಿಗೆ ಕಿರಿಕಿರಿ ಮಾಡುತ್ತಿದೆ, ಅಲ್ಲದೇ ಪಕ್ಕದಲ್ಲೇ ಗ್ಯಾರೇಜ್ ಇದ್ದು ಅದರ ಶಬ್ದದಿಂದಲೂ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ ಎಂದು ದೂರುಗಳ ಸರಮಾಲೆಯನ್ನೇ ವಿದ್ಯಾರ್ಥಿಗಳು ನೀಡಿದ್ದಾರೆ. ಸ್ಥಳದಿಂದಲೇ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಮಾತನಾಡಿದ ನಳಿನ್, ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ವಾರ್ಡನ್‌ಗೂ ಶುಚಿತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದರು.
ನಂತರ ಕಳೆದ ವರ್ಷ ಉದ್ಘಾಟನೆಗೊಂಡ ಕದ್ರಿ ಹಾಸ್ಟೇಲ್‌ಗೆ ನಳಿನ್ ಭೇಟಿ ನೀಡಿದರು, ಇಲ್ಲಿ ಶುಚಿತ್ವ ಕಂಡು ಬಂತಾದರೂ, ಆಹಾರದಲ್ಲಿ ಮೆನು ಪಾಲಿಸುತ್ತಿಲ್ಲ, ಆಹಾರದಿಂದ ಗ್ಯಾಸ್ಟಿಕ್ ಸಮಸ್ಯೆ ತಲೆದೋರಿದೆ ಎಂದು ವಿದ್ಯಾರ್ಥಿಗಳು ದೂರಿದರು. ನಂತರ ಆಶೋಕನಗರ ಹಾಸ್ಟೇಲ್‌ಗೆ ಭೇಟಿ ನೀಡಿದ್ದು, ಅಲ್ಲಿ 170 ವಿದ್ಯಾರ್ಥಿಗಳಿಗೆ ಕೇವಲ ಮೂರು ಅಡುಗೆಯವರಿದ್ದಾರೆ ಎಂಬ ಸತ್ಯ ತಿಳಿದು ಬಂತು.
ಇಲ್ಲಿನ ಅಡುಗೆ ಮನೆ, ಉಗ್ರಾಣಕ್ಕೂ ಭೇಟಿ ನೀಡಿ ಅಡುಗೆಯ ರುಚಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭ ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಕಿಶೋರ್ ರೈ, ಶ್ರೀನಿವಾಸ್ ಶೇಟ್, ವೇದವ್ಯಾಸ ಕಾಮತ್ ಮುಂತಾದವರು ಇದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಳಿನ್, ‘ಹಾಸ್ಟೇಲ್‌ಗಳ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಭೇಟಿ ನೀಡಿದ್ದೇನೆ, ಉಜ್ಜೋಡಿ ಹಾಸ್ಟೇಲ್ ಸ್ಥಿತಿ ಶೋಚನೀಯವಾಗಿದೆ, ಮುಂದಿನ ಎರಡು ದಿನಗಳೊಳಗೆ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆ ಬಗೆ ಹರಿಸುವಂತೆ ಸೂಚಿಸಲಾಗುವುದು’ಎಂದರು.
ಚಿತ್ರಗಳು: