Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಏರ್ಯಬೀಡು ಕುಟುಂಬದ ಶಿಲಾಫಲಕ ಮತ್ತು ನವೀಕೃತ ನಾಗಬನದ ಉದ್ಘಾಟನಾ ಸಮಾರಂಭ

ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಶಾಶ್ವತವಾಗಿ ಉಳಿದರೆ ಮಾತ್ರ, ಮುಂದಿನ ಪೀಳಿಗೆಗೆ ಜೀವನಕ್ರಮ ಪರಿಚಯಿಸಲು ಸಾಧ್ಯ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಹೇಳಿದ್ದಾರೆ. ಶನಿವಾರ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಏರ್ಯಬೀಡು ಗೃಹಸಮ್ಮಚ್ಛಯ, ಏರ್ಯಬೀಡು ಕುಟುಂಬದ ಚರಿತ್ರೆಯ ಹೆಜ್ಜೆಗುರುತುಗಳ ಶಿಲಾಫಲಕ ಮತ್ತು ನವೀಕೃತ ನಾಗಬನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾಂತ್ರಿಕ ಬದುಕು ಭಾವನಾತ್ಮಕ ಸಂಬಂಧಗಳ ಕೊರತೆಗೆ ಕಾರಣವಾಗುತ್ತಿದೆ. ಬದುಕಿನ ಶೈಲಿ ಬದಲಾಯಿಸದೇ ತುಳು ಪರಂಪರೆಯನ್ನು ಉಳಿಸಲು ಅಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ದೈವಾಚರಣೆಯಿಂದ ಅವಿಭಜಿತ ಕುಟುಂಬಗಳ ರಕ್ಷಣೆ : ಹೆಗ್ಗಡೆ.
ಏರ್‍ಯಬೀಡು ಗೃಹಸಮ್ಮಚ್ಛಯ, ಏರ್ಯಬೀಡು ಕುಟುಂಬದ ಚರಿತ್ರೆಯ ಹೆಜ್ಜೆಗುರುತುಗಳ ಶಿಲಾಫಲಕ ಮತ್ತು ನವೀಕೃತ ನಾಗಬನವನ್ನು ಅನಾವರಣಗೊಳಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕಾಲ ವಶವಾಗುತ್ತಿರುವ ಕೌಟುಂಬಿಕ ಮೌಲ್ಯಗಳ ಪುನರುತ್ಥಾನ ಕಾರ್ಯ ಹಿರಿಯ ನಾಗರಿಕರಿಂದ ಆಗಬೇಕು ಎಂದು ಹೇಳಿದರು.

ದೈವದ ಉತ್ಸವ, ಕೋಲ, ನೇಮ, ಜಾತ್ರೆಗಳು ಚದುರಿದ ಅವಿಭಜಿತ ಕುಟುಂಬಗಳನ್ನು ಒಗ್ಗೂಡಿಸಿ ರಕ್ಷಿಸುತ್ತವೆ. ಕುಟುಂಬಗಳ ಭಾವನಾತ್ಮಕ ಸಂಬಂಧಗಳನ್ನು ರಕ್ಷಿಸುವ ಮಹತ್ಕಾರ್ಯ ಪ್ರೀತಿ-ವಿಶ್ವಾಸಗಳಿಂದ ಕೈಗೊಳ್ಳಬೇಕು. ತಲೆಮಾರಿನ ಅಂತರ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುವ ನಿಟ್ಟಿನಲ್ಲಿ ಕೂಡು ಕುಟುಂಬಗಳ ಮನೆತನದ ಯಜಮಾನರು, ಹಿರಿಯ ವ್ಯಕ್ತಿಗಳು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಅಮ್ಟಾಡಿ ಗ್ರಾಮದ ಬಿಪಿಎಲ್ ಕಾರ್ಡ್‌ದಾರರಿಗೆ, ಕೃಷಿ, ದೈವದ ಕೆಲಸಗಾರರಿಗೆ ಏರ್ಯಬೀಡು ಪ್ರತಿಷ್ಠಾನದ ವತಿಯಿಂದ ನೀಡಲಾದ ಕ್ಷೇಮ ಆರೋಗ್ಯ ಕಾರ್ಡ್, ಜನಶ್ರೀ ವಿಮಾ ಯೋಜನೆ ಚೀಟಿಯನ್ನು ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪ್ರಾಥಮಿಕ ಕಲಿಕಾ ಹಂತದಲ್ಲಿ ಮಕ್ಕಳಿಗೆ ಅವಿಭಜಿತ ಕುಟುಂಬಗಳ ಪರಿಕಲ್ಪನೆಯನ್ನು ಮೂಡಿಸುವ ಕೆಲಸ ಆಗಬೇಕು. ಕೂಡುಕುಟುಂಬಗಳು ಸಾಮೂಹಿಕ ಬದುಕಿಗೆ, ಕೌಟುಂಬಿಕ ಸಂಬಂಧಕ್ಕೆ ಅಡಿಪಾಯವಾಗಲಿರುವ ಏರ್ಯಬೀಡು ಯೋಜನೆ ದೂರದೃಷ್ಟಿತ್ವ ಹೊಂದಿದೆ ಎಂದರು.

KAR_7244

ಯುವ ಜನರಿಂದು ಹಳ್ಳಿಗಳನ್ನು ತೊರೆದು ನಗರಕೇಂದ್ರಿತವಾಗುತ್ತಿದ್ದಾರೆ. ಹಿರಿಯರು ವೃದ್ಧಾಶ್ರಮ ಸೇರುತ್ತಿದ್ದಾರೆ. ಹಾಗಾಗಿ ಕೂಡುಕುಟುಂಬಗಳ ಕಾರ್‍ಯಕ್ರಮಗಳನ್ನು ಪ್ರಚಾರ ಪಡಿಸುವ ಅನಿವಾರ್ಯತೆ ಎದುರಾಗಿದೆ. ವಿಭಜಿತ ಕುಟುಂಬ ಪ್ರೇಮದ ಸೀಮಿತ ರೇಖೆಯಿಂದ ಹೊರಬಂದು, ನಮ್ಮ ಮಕ್ಕಳಿಗೆ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಮೊಕ್ಕಳು, ಮರಿಮಕ್ಕಳ ಬಾಂಧವ್ಯಗಳನ್ನು ಪರಿಚಯಿಸಬೇಕಾಗಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಕೂಡಯಾಗಿದೆ ಎಂದು ಮಾತೃಶ್ರೀ ಡಿ. ಹೇಮಾವತಿ ವಿ.ಹೆಗ್ಗಡೆಯವರು ಕಿವಿ ಮಾತು ನುಡಿದರು.

KAR_7226

ಏರ್ಯಬೀಡು ಸಾರ್ವಜನಿಕ ಬಸ್‌ತಂಗುದಾಣವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ಏರ್ಯಬೀಡು ಭವಾನಿ ಚಂದಯ್ಯ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮನೆತನದ ಗಡಿಹಿಡಿದ ಯಜಮಾನ, ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು, ಏರ್ಯಬೀಡು ಕೂಡುಕುಟುಂಬಗಳ ಬಗ್ಗೆ ಪ್ರಸ್ತಾವಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀಅಣ್ಣಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀಕ್ಷೇತ್ರ ಧಮಸ್ಥಳದ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ರಾಜೇಂದ್ರ ಕುಮಾರ್, ಕಮಲ ಸಂಕಪ್ಪ ಆಳ್ವ, ಸುಲೋಚನ ನರಸಿಂಹ ರೈ ಮತ್ತು ಗೋಪಿನಾಥ ರೈ ಉಪಸ್ಥಿತರಿದ್ದರು. ಕಾಸರಗೋಡು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕೂಡುಕುಟುಂಬಗಳ ಯಜಮಾನರು ಈ ಸಂದರ್ಭ ಹಾಜರಿದ್ದರು.

KAR_7239

ಚೆನ್ನಮಣೆ ಪರಿಚಯಿಸಿ!
`ನಾವು ಬಾಳಿ ಬಂದ ಕೂಡುಕುಟುಂಬಗಳ ಹಿಂದೆ-ಇಂದು-ಮುಂದೆ’ ಕುರಿತು ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಅವರು, ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವ ವಿನಿಮಯ ಸಂಸ್ಕೃತಿಯನ್ನು, ಬಟನ್ `ಶೇರಿಂಗ್’ ಅತಿಕ್ರಮಿಸಿದೆ. ಕುಟುಂಬ ಸಂಬಂಧಗಳೀಗ ಫೇಸ್‌ಬುಕ್‌ನ ಒಳಹೊಕ್ಕಿದೆ. ಕೂಡುಕುಟುಂಬಗಳ ಸಂಗಮ ಈಗ ಹೊಟೇಲ್ ಪಾರ್ಟಿಯಾಗಿ ಬೆಳೆದಿದೆ. ಈ ಜಾಗತೀಕರಣದ ಪ್ರಭಾವದ ಮಧ್ಯೆಯೂ ನಾವು ನಮ್ಮತನವನ್ನು ಉಳಿಸಲು ಸಾಧ್ಯ. ವಿದೇಶಕ್ಕೆ ಹೋಗುವ ಯುವ ಜನರು ಚೆನ್ನಮಣೆಯೊಂದು ಜತೆಗಿಟ್ಟುಕೊಳ್ಳಬೇಕು. ವಿದೇಶದ ತಮ್ಮ ಸ್ನೇಹಿತರಿಗೆ ಆಡಲು ಕಲಿಸಿ, ಆಗ ನಮ್ಮ ನಾಡಿನ ಸಂಸ್ಕೃತಿ ತಂತಾನೆ ಬೆಳೆಯುತ್ತದೆ ಎಂದರು.

Highslide for Wordpress Plugin