ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳ ಮೇಲೆ ನಿರಂತರ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು ರಾಜ್ಯ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಜನತೆ ಭಯಭೀತರಾಗಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ನಿರ್ದೇಶನ ನೀಡಬೇಕೆಂದು ಸಂಸದ ನಳಿನ್ಕುಮಾರ್ ಕಟೀಲ್ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ವಿನಂತಿಸಿದ್ದಾರೆ.
ಕರಾವಳಿ ಜಿಲ್ಲೆ ಉಗ್ರಗಾಮಿ ಸಂಘಟನೆಗಳ ಆಶ್ರಯ ತಾಣವಾಗುತ್ತಿರುವ ಬಗ್ಗೆ ಈಗಾಗಲೇ ಆತಂಕವಿದೆ. ಇತ್ತೀಚೆಗೆ ಹಿಂದುಗಳ ಮನೆಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದರೂ ಪೊಲೀಸರು ಯಾವುದೇ ಬಿಗು ಕ್ರಮಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ಹಿಂದುಗಳಿಗೆ ಭದ್ರತೆ ಇಲ್ಲವಾಗಿದೆ. ಕೇಸರಿ ಶಾಲು ಧರಿಸಿದವರನ್ನು ಊರಿಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಮತಾಂಧರು ಬಹಿರಂಗವಾಗಿ ಬೆದರಿಕೆ ಒಡ್ಡಿದ್ದು, ಇದರ ಹಿನ್ನೆಲೆಯಲ್ಲಿ ಉಗ್ರಗಾಮಿ ಸಂಘಟನೆಗಳ ಕೈವಾಡ ಇರುವ ಶಂಕೆ ಇದೆ. ಹಿಂದು ಸಂಘಟನೆಯ ಯುವಕರ ಮೇಲೆ ವಿನಾ ಕಾರಣ ಕೇಸು ದಾಖಲಿಸಿ ಜೈಲಿಗೆ ಕಳುಹಿಸುವ ಮೂಲಕ ಹಿಂದುಗಳನ್ನು ದಮನಿಸುವ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಿ ಹಿಂದುಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.