ಪುತ್ತೂರು: ಸ್ವಯಂಸೇವಕನಾಗಿ, ಹಿರಿಯರ ಒತ್ತಾಸೆಯಿಂದ ಚುನಾವಣಾ ಸ್ಪರ್ಧಿಸಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯೊಂದೇ ನನ್ನ ಮುಂದಿರುವ ಗುರಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶುಕ್ರವಾರ ಸಂಜೆ ಪುತ್ತೂರು ಬಿಜೆಪಿ ಕಚೇರಿ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪತ್ರಕರ್ತರೊಂದಿಗೆ ಮಾತನಾಡಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಹಲವು ಯೋಜನೆಗಳ ಜತೆಗೆ, ರೈಲು, ಸೆಜ್, ಐಟಿ ಪಾರ್ಕ್, ಬಂದರು, ಏರ್‌ಪೋರ್ಟ್ ಅಭಿವೃದ್ಧಿ ಮಾಡುವ ಕಡೆ ಗಮನ ಹರಿಸುತ್ತೇನೆ. ನಿರೀಕ್ಷೆಗೂ ಮೀರಿ ಅಭೂತಪೂರ್ವ ಬೆಂಬಲ ದೊರಕಿದೆ. ಇದಕ್ಕೆ ಮೊದಲ ಕಾರಣ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಬಲ್ಲ ನರೇಂದ್ರ ಮೋದಿ ಅಲೆ ಹಾಗೂ ಕಳೆದ ಐದು ವರ್ಷಗಳಲ್ಲಿ ಆದರ್ಶ ರಾಜಕಾರಣಿಯಾಗಿ ಸಜ್ಜನಿಕೆಯಿಂದ ನಡೆಸಿದ ಅಭಿವೃದ್ಧಿ ಕೆಲಸ. ಅಲ್ಲದೆ, ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಸಾಧನೆ. ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಗೂಂಡಾಗಿರಿಯಿಂದಾಗಿ, ಕಾಂಗ್ರೆಸ್ ವಿರೋಧಿ ಅಲೆ ಹಬ್ಬಿತ್ತು. ಈ ಎಲ್ಲ ಕಾರಣಗಳು ನಿರೀಕ್ಷೆಗೂ ಮೀರಿದ ಗೆಲುವನ್ನು ಬಿಜೆಪಿಗೆ ತಂದುಕೊಟ್ಟಿದೆ ಎಂದರು.
ಕಳೆದ ಮೇ 16 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶ ನಡೆದಿದೆ. ಈ ಬಾರಿ ಮೇ 16 ರಂದು ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದ ಬಿಜೆಪಿ ಪಾಲಿಗಿದೆ. ಯಶಸ್ಸಿಗೆ ಕಾರಣರಾದ ಕಾರ್ಯಕರ್ತರಿಗೆ, ಮುಖಂಡರಿಗೆ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಕೆಲವರು ಮಾನಹಾನಿ ಮಾಡುವ ಆರೋಪ ಮಾಡಿದರು. ಆದರೂ ಜನತೆ ಕೈ ಬಿಡಲಿಲ್ಲ. ಸತ್ಯಕ್ಕೆ ಜಯ ಸಂದಿದೆ. ಜಾತಿ, ಧರ್ಮವನ್ನು ಮೀರಿ ಯುವಶಕ್ತಿಗೆ ಗೆಲುವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಮೊದಲಾದವರು ಉಪಸ್ಥಿತರಿದ್ದರು.