ಬಂಟ್ವಾಳ : ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಮನೆಮನೆಗಳ ಸಂಪರ್ಕ ಕಾರ್ಯ ನಡೆಸಿದ್ದು ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿಸುವುದು ಖಚಿತ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಹೇಳಿದರು.
ಅವರು ಬಂಟ್ವಾಳ ವಿಧಾನ ಸಭಾಕ್ಷೇತ್ರದ ಸಿದ್ಧಕಟ್ಟೆಯಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ವಿವಿಧ ಮಾಧ್ಯಮ ಸಮೀಕ್ಷೆಗಳು ದೇಶದಲ್ಲಿ ಸಮಗ್ರ ಸಾಧನೆ ಮಾಡಿದ ಅತ್ಯುತ್ತಮ ಸಂಸದರ ಪೈಕಿ ತಾನು ಅರನೇ ಸ್ಥಾನದಲ್ಲಿದ್ದು ಸಂಸದರ ನಿಧಿ ಬಳಕೆಯಲ್ಲಿ ಮೊದಲ ಸ್ಥಾನ ನೀಡಿದೆ. ರಾಜಕೀಯವಾಗಿ ಯಾವುದೇ ಅನುಭವವಿಲ್ಲದಿದ್ದರೂ ಪಕ್ಷದ ವರೀಷ್ಟರ ಹಾಗೂ ಕಾರ್ಯಕರ್ತರ ಮತ್ತು ಜನತೆಯ ತೀರ್ಮಾನದಂತೆ ನೇರವಾಗಿ ಲೋಕಸಭೆ ಪ್ರವೇಶಿಸಿ ಇಂದು ದೇಶದಲ್ಲಿ ಸಂಸದರ ಪೈಕಿ ಗರಿಷ್ಟ ಸ್ಥಾನ ಗಳಿಸಿದೆ. ಪ್ರಾಮಾಣಿಕವಾಗಿ , ಆದರ್ಶ ರಾಜಕಾರಣಿಯಾಗಿ ಆರಿಸಿ ಕಳುಹಿಸಿದ ಜನತೆಯ ಸೇವೆ ಸಲ್ಲಿಸಿದ್ದೇನೆ. ಪಕ್ಷದ ಸ್ಥಳೀಯ ಅಧ್ಯಕ್ಷರ ಪಟ್ಟಿ ಪ್ರಕಾರ ಅನುದಾನ ನೀಡಿದ್ದು ಕಾರ್ಯಕರ್ತರ ಮುತುವರ್ಜಿಯಿಂದ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು. ನರೇಂದ್ರ ಮೋದಿ ಅವರ ಅದ್ಭುತ ಚಿಂತನೆಯ ಪ್ರಕಾರ ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಸುಧಾರಣೆಯ ಅದ್ಯತೆ ಜತೆಗೆ ಬಂದರು, ಪ್ರವಾಸೋದ್ಯಮಗಳ ಅಭಿವೃದ್ಧಿ , ಪರಿಸರ ಹಾನಿಯಾಗದಂತೆ ಉದ್ಯೋಗ ಸೃಷ್ಟಿ ಮೊದಲಾದ ಕನಸುಗಳನ್ನು ಸಾಕಾರಗೊಳಿಸಲು ಬಿಜೆಪಿಗೆ ಮತ ನೀಡಿ ಮೋದಿ ಅವರನ್ನು ಪ್ರಧಾನಿಯಾಗಿಸಿ ಎಂದು ಅವರು ವಿನಂತಿಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ಅಧಿಕಾರವಧಿಯಲ್ಲಿ ಬಂಟ್ವಾಳಕ್ಕೆ ಪಾಲಿಟೆಕ್ನಿಕ್, ಆಸ್ಪತ್ರೆ ,ಅಗ್ನಿಶಾಮಕ ದಳ, ಕೋರ್ಟ್ ಮೊದಲಾದ ಯೋಜನೆಗಳು ಮಂಜೂರಾಗಿದ್ದು, ಬಿಜೆಪಿಯ ಸಾಧನೆಗಳನ್ನು ಕಾಂಗ್ರೆಸ್ ತನ್ನ ಸಾಧನೆಗಳೆಂದು ಹೇಳಿಕೊಂಡುಬರುತ್ತಿದೆ. ಅವರಿಗೆ ನೈತಿಕತೆಯಿದ್ದರೆ, ಕಾಂಗ್ರೆಸ್ ತನ್ನ ಶಾಸಕರ ಒಂದೇ ಒಂದು ಯೋಜನೆಯನ್ನು ತೋರಿಸಿಕೊಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ಪ್ರಮುಖರಾದ ಮೋನಪ್ಪ ಭಂಡಾರಿ, ಜಿ. ಆನಂದ, ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು , ಪದ್ಮನಾಭ ಕೊಟ್ಟಾರಿ, ಸುಲೋಚನಾ ಜಿ.ಕೆ.ಭಟ್, ಪುರುಷ ಎನ್. ಸಾಲಿಯಾನ್, ನಳಿನಿ ಬಿ. ಶೆಟ್ಟಿ, ಸ್ಥಳೀಯ ಪ್ರಮುಖರಾದ ರತ್ನಕುಮಾರ್ ಚೌಟ, ಆನಂದ ಎಡ್ತೂರು, ಎಸ್.ಪಿ. ಶ್ರೀಧರ್, ಸತೀಶ್ ಪೂಜಾರಿ, ಸಂದೇಶ್ ಶೆಟ್ಟಿ , ಮಹಾಬಲ ಶೆಟ್ಟಿ , ಬೇಬಿ, ವಸಂತಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸಿದ್ಧಕಟ್ಟೆ ಪೇಟೆಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ನಳಿನ್ ಅವರು ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.