ಬಂಟ್ವಾಳ: ಯಕ್ಷಗಾನ ಮನುಷ್ಯನ ವ್ಯಕ್ತಿತ್ವವನ್ನು ನಿತ್ಯನೂತನಗೊಳಿಸಲು ಅತ್ಯಂತ ಪ್ರಭಾವಶಾಲಿ ಮಾಧ್ಯಮ ಎಂದು ಕಾಸರಗೋಡು ಶ್ರೀ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಮಹಾ ಸ್ವಾಮೀಜಿ ಹೇಳಿದರು.
ಕೊಳ್ನಾಡು ಗ್ರಾಮದ ಮಂಚಿ, ಕನಕಗಿರಿ ಶ್ರೀಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿಯ ವತಿಯಿಂದ ನಡೆದ ಯಕ್ಷ ಉತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದ ಯಾವುದೇ ಸಂದರ್ಭದಲ್ಲಿ ನಿಂದೆ ಮತ್ತು ಸ್ತುತಿಯನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಮನುಷ್ಯ ಧೈರ್ಯಶಾಲಿಯಾಗುತ್ತಾನೆ. ವಿನಮ್ರತೆ, ಸರಳತೆ ವ್ಯಕ್ತಿತ್ವವನ್ನು ದೈವತ್ವಕ್ಕೆ ಕೊಂಡೊಯ್ಯುತ್ತದೆ ಎಂದರು.
ಯಕ್ಷಗಾನವನ್ನು ಯುವ ಜನರ ಕಡೆಗೆ ಆಕರ್ಷಿಸುವ ವೈಜ್ಞಾನಿಕ ತಂತ್ರಗಾರಿಕೆ ಅಳವಡಿಸುವ ಕಾರ್ಯ ಆಗಬೇಕು. ಯಕ್ಷ ಜಾಗೃತಿಗೆ ವಿಜ್ಞಾನವನ್ನು ಪೂರಕವಾಗಿ ಬಳಸಿಕೊಂಡಾಗ ಪ್ರೇರಣಾ ಶಕ್ತಿಯಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಹಿರಿಯ ಯಕ್ಷಗಾನ ಕಲಾವಿದ ಬರೆ ಕೇಶವ ಭಟ್ ಪೌರಾಣಿಕ ಹಿನ್ನಲೆಯನ್ನು ವ್ಯಾಖ್ಯಾನಿಸಿದರು.
ಜಾತೀಯತೆ ಪ್ರವೇಶಿಸದಿರಲಿ:
ಯಕ್ಷಗಾನ ಕ್ಷೇತ್ರ ಇಂದು ಜಾತೀಯತೆ, ಮೌಲ್ಯಮಾಪನ, ಧರ್ಮದ ಚೌಕಟ್ಟು ಎನ್ನುವ ಮೂರು ಸವಾಲುಗಳನ್ನು ಎದುರುತ್ತಿದೆ. ಈ ಸವಾಲನ್ನು ಮೀರಿ ಯಕ್ಷಗಾನ ಕಲೆಯನ್ನು ಆಸ್ವಾದಿಸಿ, ಪೋಷಿಸಬೇಕಾಗಿದೆ. ಪರಿಪಕ್ವತೆ, ಪರಿಪೂರ್ಣತೆ ಹಾಗೂ ತನ್ಮಯತೆ ಮೈಗೊಂಡಾಗ ಕಲಾ ಪ್ರಕಾರದ ಮೂಲಸತ್ವಕ್ಕೆ ಯಾವುದೇ ಅಪಾಯ ಉಂಟಾಗದು. ಮೂಲ ಮಂತ್ರವನ್ನು ತೊರೆಯದೇ, ಕಲೆಯನ್ನು ಸಮಾಜಮುಖಿಯಾಗಿ ಸಂಯೋಜಿಸುವ ಜಾಣ್ಮೆಯನ್ನು ಮೈಗೂಡಿಸಬೇಕೆಂದು ಹಿರಿಯ ಯಕ್ಷಗಾನ ಕಲಾವಿದ, ಸಾಹಿತಿ ಡಾ. ರಮಾನಂದ ಬನಾರಿ ಉಪನ್ಯಾಸ ನೀಡಿದರು. ಶ್ರೀಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿಯ ಸಂಚಾಲಕ ಕೈಯ್ಯೂರು ನಾರಾಯಣ ಭಟ್ ಪ್ರಸ್ತಾವಿಸಿ, ಸ್ವಾಗತಿಸಿದರು. ಆಡಳಿತ ಸಮಿತಿಯ ಸೀತಾರಾಮ ಶೆಟ್ಟಿ ಸಿ.ಹೆಚ್ ವಂದಿಸಿದರು. ತಿರುಮಲೇಶ ಕೈಯ್ಯೂರು ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಪ್ರದರ್ಶನ:
ಸಭಾ ಕಾರ್ಯಕ್ರಮಕ್ಕೆ ಮುನ್ನ ಬೋಳ್ಯಾರು ದೇವದಾಸ ಶೆಟ್ಟಿ ದಂಪತಿಯಿಂದ ಶ್ರೀದುರ್ಗಾ ಪೂಜೆ, ಸುಳ್ಯ, ಕುಂಭಗೋಡು, ಶ್ರೀ ಪುಂಡಲೀಕ ನಾಯಕ್ ಬಳಗದಿಂದ ಭಜನಾ ಸೇವೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಎಡನೀರು ಶ್ರೀ ಗೋಪಾಲಕೃಷ್ಣ ಕಲಾ ಮಂಡಳಿಯ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶಿಸಲಾಯಿತು.