Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ರಾಷ್ಟ್ರೀಯ ಹೆದ್ದಾರಿ ಶಿರಾಡಿಯ ಕಾಮಗಾರಿ ಶೀಘ್ರ ಆರಂಭಕ್ಕೆ ಕರೆ

ಮಂಗಳೂರು : ಮಂಗಳೂರು-ಬೆಂಗಳೂರು ಹೆದ್ದಾರಿಯ ಶಿರಾಡಿಘಾಟ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಪಡಿಸುವ ಕಾರ್ಯವನ್ನು ಡಿಸೆಂಬರ್‌ಗೂ ಮುಂಚೆ ಆರಂಭಿಸಬೇಕೆಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್‌ಕುಮಾರ್ ಕಟೀಲ್ ಇವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಶಿರಾಡಿಘಾಟ್ ಪ್ರದೇಶದ ರಸ್ತೆ ದುರಸ್ತಿ ಕಾಮಗಾರಿಗೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ಹಾಗೂ ಟೆಂಡರ್ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂರವರೊಂದಿಗೆ ಪರಿಶೀಲಿಸಿ ಮಾತನಾಡಿದರು.

ಶಿರಾಡಿಘಾಟ್ ಪ್ರದೇಶದಲ್ಲಿ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭಿಸುವುದರಿಂದರಸ್ತೆಯನ್ನುಸುಮಾರು೬ತಿಂಗಳ ಕಾಲ ಬಂದ್ ಮಾಡುವುದರಿಂದ ಜನರಿಗೆ ತೊಂದರೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆಗಾಗಿ ಮಂಗಳೂರು -ಬೆಂಗಳೂರು, ಮಂಗಳೂರು-ಹಾಸನ, ಸುಬ್ರಹ್ಮಣ್ಯ-ಹಾಸನ ಮಾರ್ಗಗಳಲ್ಲಿ ಹೆಚ್ಚುವರಿ ರೈಲು ಸಂಚಾರವನ್ನು ಆರಂಭಿಸುವಂತೆ ಹಾಗೂ ಸಾಮಾನು ಸರಂಜಾಮು ಸಾಗಾಟಕ್ಕೆ ಗೂಡ್ಸ್ ರೈಲುಗಳನ್ನು ಆವಶ್ಯಕತೆಗನುಗುಣವಾಗಿ ಆರಂಭಿಸಲು ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕೂಡಲೇ ತಮಗೆ ನೀಡಿದಲ್ಲಿ ಸದರಿ ಪ್ರಸ್ತಾವನೆಯನ್ನು ಲೋಕಸಭೆಯ ಈ ಮುಂಗಾರು ಅಧಿವೇಶನದೊಳಗಾಗಿಯೇ ಮಂಜೂರಾತಿ ಪಡೆಯುವುದಾಗಿ ಸಂಸದರು ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದರು.

ಈ ಮಧ್ಯೆ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಂಟಾಗಿರುವ ಹೊಂಡಗಳನ್ನು ಆದ್ಯತೆ ಮೇರೆಗೆ ಮುಚ್ಚಲು ಸಂಸದರು ಅಧಿಕಾರಿಗಳಿಗೆ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ 70ಸುರತ್ಕಲ್‌ನಿಂದ ಕುಂದಾಪುರ ಮಾರ್ಗದಲ್ಲಿ ಕಾಮಗಾರಿಯು ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ವಾಹನ ಓಡಾಟಕ್ಕೆ ತೊಂದರೆಯಾಗುತ್ತಿರುವುದರಿಂದ ಕೂಡಲೇ ಕಾಮಗಾರಿಯನ್ನು ಪುನರಾರಂಭಿಸಿ 2-3 ತಿಂಗಳಲ್ಲಿಯೇ ಪೂರ್ಣಗೊಳಿಸಲು ಸಭೆಯಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀರಾಮ್ ಮಿಶ್ರಾ ಅವರಿಗೆ ಸಂಸದರು ಸೂಚಿಸಿದರು.

ಮಂಗಳೂರಿನ ಪಂಪ್‌ವೆಲ್ ಸರ್ಕಲ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈ ಓವರ್ ಕಾಮಗಾರಿಯನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಶೀಘ್ರ ಆರಂಭಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರವರು ಅದಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ನಟರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಹಾನಗರಪಾಲಿಕೆ ಸಹಾಯಕ ಅಯುಕ್ತ ಗೋಪಾಲ್ ನಾಯಕ್, ಕಾರ್ಯಪಾಲಕ ಅಬಿಯಂತರ ರಾಜಶೇಖರ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

Highslide for Wordpress Plugin