ಮಂಗಳೂರು : ಶೃಂಗೇರಿ ಸಮೀಪ ಕಬೀರ್ ಎನ್‌ಕೌಂಟರ್ ಪ್ರಕರಣವನ್ನು ನಿಷ್ಪಕ್ಷ ರೀತಿಯಲ್ಲಿ ತನಿಖೆ ನಡೆಸುವುದಕ್ಕಾಗಿ ರಾಜ್ಯ ಸರಕಾರ ಸಿಬಿಐಗೆ ವಹಿಸಿಕೊಡಲಿ. ಪ್ರಕರಣದಲ್ಲಿ ಧರ್ಮ ಮತ್ತು ರಾಜಕೀಯವನ್ನು ಬೆರೆಸುವ ಕೆಲಸವನ್ನು ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರಕಾರ ಮಾಡುವುದು ಸರಿಯಲ್ಲ ಎಂದು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನೈಜ ಘಟನೆ ಏನು ಎಂಬುವುದರ ಸಮಗ್ರ ತನಿಖೆಗಾಗಿ ಮತ್ತು ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ನೀಡುವುದು ಒಳ್ಳೆಯದು. ಎಎನ್‌ಎಫ್ ಸಿಬ್ಬಂದಿಗಳು ನಕ್ಸಲ್ ನಿಗ್ರಹಕ್ಕೆ ಸಂಬಂಧಿಸಿದಂತೆ ನಿರಂತರ ಕಾರ್ಯನಿರ್ವಹಿಸುತ್ತಿದ್ದು, ಇಡೀ ವ್ಯವಸ್ಥೆಯ ಆತ್ಮಸ್ಥೈರ್ಯಕ್ಕೆ ಕುಂದು ಉಂಟಾಗದ ರೀತಿಯಲ್ಲಿ ರಾಜ್ಯ ಸರಕಾರ ವರ್ತಿಸುವ ಅಗತ್ಯವಿದೆ. ಇಲ್ಲವಾದರೆ ನಮ್ಮ ರಕ್ಷಣಾ ವ್ಯವಸ್ಥೆ ಶಿಥಿಲಗೊಳ್ಳುವ ಸಾಧ್ಯತೆಗಳಿವೆ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಕರಣವನ್ನು ಧರ್ಮ ಮತ್ತು ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ತೀರ್ಮಾನವನ್ನು ಸಕಾಲದಲ್ಲಿ ತೆಗೆದುಕೊಳ್ಳಬೇಕು. ತಕ್ಷಣ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಲಿ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕಬೀರ್ ಕುಟುಂಬಕ್ಕೆ 10 ಲಕ್ಷ ರೂ.ಗಳನ್ನು ತಕ್ಷಣ ಘೋಷಿಸಿದೆ. ಅದೇ ಮಾದರಿಯಲ್ಲಿ ಇತ್ತೀಚೆಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಅವಭೃತ ಸವಾರಿ ಸಂದರ್ಭ ಅಕಸ್ಮಿಕವಾಗಿ ನೀರಿಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಇದೊಂದು ಅಕಸ್ಮಿಕ ಘಟನೆಯಾಗಿದ್ದು, ಇವರ ಕುಟುಂಬಕ್ಕೂ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ. ಅಕಸ್ಮಿಕ ದುರ್ಘಟನೆಗಳು ಸಂಭವಿಸಿದಾಗ ರಾಜ್ಯ ಸರಕಾರ ಅದನ್ನು ಧರ್ಮದ ಆಧಾರದಲ್ಲಿ ನೋಡುವುದು ಸರಿಯಲ್ಲ. ಈ ಹಿನ್ನೆಲೆಯಿಂದ ನೀರುಪಾಲಾದ ಈ ಇಬ್ಬರು ಮುಗ್ಧ ವಿದ್ಯಾರ್ಥಿಗಳ ಕುಟುಂಬಕ್ಕೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.