Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕಾಂಗ್ರೆಸ್‌ನಿಂದ ಮತ್ತೀಗ ಜನರನ್ನು ಮೂರ್ಖರನ್ನಾಗಿಸುವ ಪ್ರಣಾಳಿಕೆ ಬಿಡುಗಡೆ – ನಳೀನ್ ಕಟೀಲ್

ಬಂಟ್ವಾಳ : ಕಾಂಗ್ರೆಸ್ ಅಂಗೈಯಲ್ಲಿ ಅರಮನೆ ತೋರಿಸುವ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದೆ. ಆದರೆ ಇದರಲ್ಲಿ ಯಾವುದಾದರೂ ಅವರು ಅನುಷ್ಠಾನಕ್ಕೆ ತರವಂತದಲ್ಲ. ಒಂದು ವೇಳೆ ಅವರು ಇಷ್ಟು ವರ್ಷಗಳಲ್ಲಿ ಮಂಡಿಸಿದ ಪ್ರಣಾಳಿಕೆಯನ್ನು ಅನುಷ್ಟಾನಕ್ಕೆ ತರುತ್ತಿದ್ದರೆ ಇವತ್ತಿಗೂ ದೇಶದಲ್ಲಿ ಬಡತನ, ನಿರುದ್ಯೋಗ ಯಾಕೆ ತಾಂಡವಾಡಬೇಕಿತ್ತು? ಇದೀಗ ಮತ್ತೇ ಜನರನ್ನು ಮೂರ್ಖರನ್ನಾಗಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಗುರುವಾರ ಬಿ.ಸಿ ರೋಡಿನ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗ ಕಾಂಗ್ರೆಸ್ ಸೋಲಿನ ಭೀತಿಯಿಂದ ಬಾಯಿಗೆ ಬಂದ ಹಾಗೆ ಮಾತಾಡುತ್ತಿದೆ. ಈ ಬಾರಿ ಜನತೆ ಕಾಂಗ್ರೆಸನ್ನು ನಂಬಲ್ಲ. ಸರಿಯಾದ ಬುದ್ದಿ ಕಲಿಸಲು ತೀರ್ಮಾನಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಆಳ್ವಿಕೆಯ ಒಂದೇ ವರ್ಷದಲ್ಲಿ ಜನತೆ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಕಾಂಗ್ರೇಸ್ ಸರಕಾರ ಗೂಂಡಾ ರಾಜ್ಯವಾಗಿದೆ ಅತ್ಯಾಚಾರ, ಅನ್ಯಾಯ, ಆಕ್ರಮಣಕೋರರ ರಾಜ್ಯ ಎಂಬುದನ್ನು ಸಾಬೀತು ಮಾಡಿದೆ ಎಂದು ಹೇಳಿದ ಅವರು ರಾಜ್ಯ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಲೆ, ಗೋ ಕಳ್ಳತನ, ಹಲ್ಲೆ. ಮಹಿಳೆಯರ ಮೇಲಿನ ದೌರ್ಜನ್ಯ ಮಿತಿಮೀರಿದರೂ ಯಾಕೆ ತನಿಖೆ ನಡೆಸಿಲ್ಲ. ತನಿಖೆ ನಡೆಸಿದರೆ ಕಾಂಗ್ರೆಸಿಗರ ಬಣ್ಣ ಬಯಲಾಗುತ್ತದೆ. ಯಾಕೆಂದರೆ ಈ ಎಲ್ಲ ಪ್ರಕರಣಗಳಲ್ಲೂ ಕಾಂಗ್ರೆಸ್ ನ ಪ್ರಮುಖರು ಶಾಮೀಲಾಗಿದ್ದಾರೆ ಎಂದು ತಿಳಿಸಿದರು.

ಅಭೂತಪೂರ್ವ ಬೆಂಬಲ
ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸುವ ಮೂಲಕ ಜಿಲ್ಲೆಯಲ್ಲಿ ಈಗಾಗಲೇ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ. ನಾವು ಹೋದಲ್ಲೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಹಾಗೂ ಪರಿವಾರದ ಕಾರ್ಯಕರ್ತರು ಈ ಹಿಂದಿಗಿಂತಲೂ ಈ ಬಾರಿ ಅತೀ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಕಡೆಗಳಲ್ಲಿಯೂ ಕಾರ್ಯಕರ್ತರನ್ನು ಭೇಟಿಯಾಗಿ ಬಿಜೆಪಿಯ ಸಾಧನೆ, ಕಾಂಗ್ರೇಸ್ ಜನವಿರೋಧಿ ನೀತಿಯ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಲಾಗುತ್ತಿದೆ. ಮುಂದೆ ಕಾರ್ಯಕರ್ತರು ಮೂರು ಹಂತಗಳಲ್ಲಿ ಮನೆಮನೆಗೆ ಭೇಟಿ ನೀಡಿ ಮತದಾರರನ್ನು ಮನವೊಲಿಸುವ ಮೂಲಕ ಬಿಜೆಪಿ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.

ಕಾಂಗ್ರೆಸ್ ನಿಂದ ಅಶಾಂತಿ
ಕಾಂಗ್ರೆಸ್ ಸೋಲಿನ ಭೀತಿಯಲ್ಲಿದ್ದು, ಅದಕ್ಕಾಗಿ ಅಲ್ಲಲ್ಲಿ ಸಾಮರಸ್ಯ ಎಂಬ ಹೆಸರಿನಲ್ಲಿ ಸಮಾವೇಷ ನಡೆಸಿ, ಬಿಜೆಪಿಗರ ಮೇಲೆ ಹಲ್ಲೆ ನಡೆಸಿ ಕೋಮುಭಾವನೆ ಕೆರಳಿಸಿ, ಅಶಾಂತಿಯನ್ನು ಸೃಷ್ಟಿಸಿ ಮತ ಪಡೆಯುವ ಷಡ್ಯಂತ್ರ ನಡೆಸುತ್ತಿದೆ ಎಂದು ತಿಳಿಸಿದ ಅವರು  ಈ ಹಿಂದೆ ಉಚಿತ ವಿದ್ಯುತ್ ಕೊಡುತ್ತೇವೆಂದು ಹೇಳಿದ ಈ ರಾಜ್ಯ ಸರಕಾರಕ್ಕೆ ಈಗ ದುಡ್ಡು ಕೊಟ್ಟರೂ ವಿದ್ಯುತ್ ಕೊಡುವ ಯೋಗ್ಯತೆ ಇಲ್ಲ. ಆಧಾರ್ ಬೇಕು ಎನ್ನುವ ಕಾಂಗ್ರೆಸ್ ಆಧಾರ್ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ಲೂಟಿ ಮಾಡಿದೆ ವಿನಹ ಜನರಿಗೆ ಏನೂ ಪ್ರಯೋಜನವಾಗಿಲ್ಲ. ಈಗ ಕಾಂಗ್ರೆಸ್ ಆಧಾರವನ್ನು ಕಳೆದುಕೊಂಡಿದೆ ಎಂದರು.

ಜಿಲ್ಲೆಯಲ್ಲಿ ನಾಲ್ವರು ಸಚಿವರಿರುವಾಗ ಜನತೆ ಭಾರಿ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದರು. ಆದರೆ ದ.ಕ,ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಅವರ್‍ಯಾರೂ ಜಿಲ್ಲೆಗೋಸ್ಕರ ಏನನ್ನಾದರೂ ಮಾಡಿದ್ದರೆ ಸಾಬೀತು ಪಡಿಸಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆದ ಅಭಿವೃದ್ಧಿ ಕಾರ್‍ಯಗಳನ್ನು ನಾವೂ ಬಹಿರಂಗ ಪಡಿಸುತ್ತೇವೆ ಎಂದರು.

ಕಾಂಗ್ರೆಸ್ ನಾಯಕರು ತಮ್ಮ ಬೌದ್ಧಿಕ ಮಟ್ಟವನ್ನೇ ಕಳೆದುಕೊಂಡಿದ್ದಾರೆ. ಅದರಿಂದ ಬಿಜೆಪಿಗರ ಮೇಲೆ ವೈಯಕ್ತಿಕ ಟೀಕೆ, ನಿಂದನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ಅವರು ಇವರಿಗೆ ಬೌದ್ದಿಕ ಮಟ್ಟ ಚೆನ್ನಾಗಿದ್ದರೆ ಇವರ ಸಾಧನೆಯನ್ನು ಹೇಳಿ ಮತ ಯಾಚಿಸಲಿ. ಎಂದರು.

ಲೋಕಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಕ್ಷೇತ್ರ ಸಮಿತಿ ಚುನಾವಣಾ ಪ್ರಮುಖ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪಕ್ಷದ ಪ್ರಮುಖರಾದ ಶ್ರೀಕರ ಪ್ರಭು, ಸಂಜೀವ ಮಠಂದೂರು, ದಿನೇಶ್ ಭಂಡಾರಿ, ವಿನಯ ನಾಯಕ್, ಪುರುಷ ಸಾಲಿಯನ್, ಪುಷ್ಪರಾಜ ಶೆಟ್ಟಿ, ಪ್ರಥ್ವಿರಾಜ್, ದೇವಪ್ಪ ಪೂಜಾರಿ, ಆನಂದ ಶಂಭೂರು ಮೊದಲಾದವರಿದ್ದರು.

Highslide for Wordpress Plugin