Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ದೇರಳಕಟ್ಟೆ ಪ್ರಕರಣದ ತನಿಖೆಗೆ ಪ್ರತ್ಯೇಕ ಪೊಲೀಸ್ ತಂಡ ರಚಿಸಿ : ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು : ದೇರಳಕಟ್ಟೆ ಪರಿಸರದಲ್ಲಿ ವಿದ್ಯಾರ್ಥಿಗಳನ್ನು ಅಪಹರಿಸಿ ಅನೈತಿಕ ಕ್ರಿಯೆಯಲ್ಲಿ ತೊಡಗುವಂತೆ ಬೆದರಿಸಿ ಅದರ ಚಿತ್ರೀಕರಣಗೈದು ಬ್ಲ್ಯಾಕ್ ಮೇಲ್ ಮಾಡಿ ಹಣ ಮಾಡಲು ಹೊರಟಿರುವ ಕ್ರೂರ ಕೃತ್ಯದ ಸಮಗ್ರ ತನಿಖೆಗೆ ದಕ್ಷ ಪೊಲೀಸರನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.

ಇದು ಅತ್ಯಂತ ಗಂಭೀರ ಕೃತ್ಯವಾಗಿದ್ದು, ಕರಾವಳಿಯ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕತೆ ಮೇಲೆ ಪ್ರಭಾವ ಬೀರಲಿದೆ. ಬಂಧಿತ ಆರೋಪಿಗಳ ಹಿಂದೆ ವ್ಯವಸ್ಥಿತವಾಗಿ ಕೆಲಸ ಮಾಡುವವರನ್ನು ಪತ್ತೆ ಮಾಡಬೇಕಾದರೆ, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಆಗ ಇದರ ಹಿಂದಿರುವ ಸೂತ್ರದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಬಂಧಿತ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಇನ್ನು ಮುಂದೆ ಇಂತಹ ಕೃತ್ಯಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಕೃತ್ಯಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವುದು, ಕಳವಳಕಾರಿ ಸಂಗತಿಯಾಗಿದೆ. ಇಂತಹ ಆರೋಪಿಗಳ ವಿರುದ್ಧ ರಾಜ್ಯ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲೆಯ ಎಲ್ಲ ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಸಂಘಟನೆಗಳನ್ನು ಸೇರಿಸಿಕೊಂಡು ಬಿಜೆಪಿ ಬೃಹತ್ ಪ್ರತಿಭಟನಾ ಆಂದೋಲನವನ್ನು ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಇಂತಹ ಅಮಾನವಿಕ ಕೃತ್ಯ ನಡೆದಾಗ ಜಾತಿ, ಧರ್ಮ, ರಾಜಕೀಯ ಹಿತಾಸಕ್ತಿಯನ್ನು ಬದಿಗಿಟ್ಟು, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಎಲ್ಲರು ಜತೆಯಾಗಬೇಕು. ಇಂತಹ ಕೃತ್ಯಗಳಿಗೆ ಬೆಂಬಲಿಸುವ ರಾಜಕೀಯ ಪಕ್ಷ ಅಥವಾ ಮುಖಂಡರ ವಿರುದ್ಧ ಜನರು ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿದೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Highslide for Wordpress Plugin