ಬಂಟ್ವಾಳ; ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಜಾತಿ, ವ್ಯಕ್ತಿಯನ್ನು ಮೀರಿ ಹಿಂದುತ್ವ ಹಾಗೂ ರಾಷ್ಟ್ರೀಯತೆ ಗೆಲುವು ಸಾಧಿಸಿದ್ದು, ಮತನೀಡಿ ದಾಖಲೆಯ ಅಂತರದೊಂದಿಗೆ ತನ್ನನ್ನು ಚುನಾಯಿಸಿದ ಮತದಾರರಿಗೆ ತಾನು ಋಣಿಯಾಗಿರುವುದಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಶುಕ್ರವಾರ ಅಪರಾಹ್ನ ಬಿ.ಸಿ.ರೋಡಿಗೆ ಆಗಮಿಸಿದ್ದ ಅವರನ್ನು ಕಾರ್ಯಕರ್ತರು ಮೆರವಣಿಗೆಯಲ್ಲಿ ಬಿಜೆಪಿ ಚುನಾವಣಾ ಕಛೇರಿಗೆ ಕರೆ ತಂದ ಬಳಿಕ ಅವರು, ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ತನ್ನ ಗೆಲುವನ್ನು ಕಾರ್ಯಕರ್ತರ ಶ್ರಮಕ್ಕೆ ಅರ್ಪಿಸುವುದಾಗಿ ಹೇಳಿದ, ಸಾಕಷ್ಟು ಅಪವಾದಗಳು ತನ್ನ ಮೇಲಿದ್ದರೂ, ಕಾರ್ಯಕರ್ತರ, ಮತದಾರರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು. ಜಿಲ್ಲಾ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಕ್ಷೇತ್ರ ಚುನಾವಣಾ ಪ್ರಮುಖ್ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ , ಜಿಲ್ಲಾ ಉಪಾದ್ಯಕ್ಷ ದೇವದಾಸ ಶೆಟ್ಟಿ,ರಾಮ್ದಾಸ್ ಬಂಟ್ವಾಳ, ಚೆನ್ನಪ್ಪ ಕೋಟ್ಯಾನ್,ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ಆನಂದ ಎ.ಶಂಬೂರು, ಪುರುಷೋತ್ತಮ ಸಾಲಿಯಾನ್ ನರಿಕೊಂಬು ಮೊದಲಾದವರು ಉಪಸ್ಥಿತರಿದ್ದರು.
ಡಾ.ಭಟ್-ನಳಿನ್ ಭೇಟಿ
ಬಿ.ಸಿ.ರೋಡ್ ಕಚೇರಿಯಿಂದ ನೇರವಾಗಿ ಕಲ್ಲಡ್ಕಕ್ಕೆ ತೆರಲಿ ನಳಿನ್ ಕುಮಾರ್ ಅವರು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪ್ರಮುಖರಾದ ನಾರಾಯಣ ಸೋಮಯಾಜಿ, ಪುರುಷ ಎನ್ ಸಾಲಿಯಾನ್, ನಿತಿನ್ ಕುಮಾರ್, ಮತ್ತಿತರರು ಇದ್ದರು.