Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಬಯಲು ಶೌಚ ಮುಕ್ತ ನಗರ ಪ್ರಮಾಣ ಪತ್ರ

ಮಂಗಳೂರು: ಸ್ಮಾರ್ಟ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ  ಮಂಗಳೂರು ಇದೀಗ ಭಾರತೀಯ ಗುಣಮಟ್ಟ ನಿಯಂತ್ರಣ ಮಂಡಳಿಯಿಂದ ಬಯಲು ಶೌಚ ಮುಕ್ತ ನಗರ ಪ್ರಮಾಣ ಪತ್ರ ಪಡೆಯುವ ಮೂಲಕ ಇನ್ನೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

bayalu-showcha

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಆಂದೋಲನವೆಂಬ ಬೃಹತ್‌ ನೈರ್ಮಲ್ಯ ಆಂದೋಲನ ಆರಂಭಿಸಿ ಭಾರತ ಬಯಲು ಶೌಚಮುಕ್ತವಾಗಬೇಕೆಂದು ಕರೆ ನೀಡಿದ್ದರು. ರಾಜ್ಯ ಧ್ಯೇಯ ಸಚಿವಾಲಯ ಮತ್ತು ನಗರಗಳ ಸ್ಥಳೀಯ ಸಮಿತಿಗಳ ಸಂಯೋಜನೆಯೊಂದಿಗೆ ನಾಗರಿಕ ಅಭಿವೃದ್ಧಿ ಸಚಿವಾಲಯ ಈ ಧ್ಯೇಯದ ಅಡಿಯಲ್ಲಿ ಗುರಿ ಸಾಧಿಸಲು ಅವಿರತ ಶ್ರಮಿಸುತ್ತಿದೆ. ಈಗಾಗಲೇ 2 ವರ್ಷಗಳ ಆಂದೋಲನ ಪೂರ್ಣಗೊಂಡಿದೆ. ಸ್ವಚ್ಛತಾ ವಾರವನ್ನು ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನವಾದ ಸೆ. 25ರಂದು ಆರಂಭಿಸಿ ಮಹಾತ್ಮಾ ಗಾಂಧಿ ಅವರ ಜನ್ಮದಿನವಾದ ಅ. 2ರಂದು ಸಮಾಪ್ತಿಗೊಳಿಸಲಾಗುತ್ತಿದೆ. ಈ ಸ್ವಚ್ಛತಾ ವಾರದ ಸಂದರ್ಭ ಮಂಗಳೂರು ಭಾರತೀಯ ಗುಣಮಟ್ಟ ನಿಯಂತ್ರಣದಿಂದ (ಕ್ಯುಸಿಐ) ಬಯಲು ಶೌಚಾಲಯ ಮುಕ್ತ ಎಂದು ಘೋಷಿಸಿಕೊಂಡಿದೆ.

ಬುಧವಾರ ನಗರ ಪಾಲಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಗುಣಮಟ್ಟ ಸಮಿತಿ ಮುಖ್ಯಸ್ಥರು ಪ್ರಮಾಣ ಪತ್ರವನ್ನು ಪಾಲಿಕೆಗೆ ಹಸ್ತಾಂತರಿಸಿದರು.

ಪ್ರಶಸ್ತಿಯೊಂದಿಗೆ ಜವಾಬ್ದಾರಿಯೂ ಹೆಚ್ಚಿದೆ 
ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮಾತನಾಡಿ, ಇಡೀ ರಾಜ್ಯವನ್ನು ಬಯಲು ಶೌಚ ಮುಕ್ತ ರಾಜ್ಯವನ್ನಾಗಿಸುವ ಯೋಜನೆ ಸರಕಾರದ ಮುಂದಿದೆ. ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ಬಯಲು ಮಲ ವಿಸರ್ಜನೆಯಿಂದಾಗುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಿಗೆ ತನ್ನದೇ ಆದ ಜವಾಬ್ದಾರಿಯಿದ್ದು, ಪ್ರಶಸ್ತಿಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಪ್ರತೀ ಗ್ರಾ.ಪಂ. ವ್ಯಾಪ್ತಿಗಳಲ್ಲೂ ಸಮಿತಿ ರಚನೆ ಮಾಡಿ ದುಷ್ಪರಿಣಾಮ ಹಾಗೂ ರೋಗಗಳು ಎದುರಾಗುವ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ಸರಕಾರ ನಡೆಸುತ್ತಿದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಹರಿನಾಥ್‌ ಮಾತನಾಡಿ, ಮಂಗಳೂರು ನಗರ ಪಾಲಿಕೆಗೆ ಬಯಲು ಶೌಚಮುಕ್ತ ನಗರವೆಂಬ ಪ್ರಮಾಣ ಪತ್ರ ದೊರಕಿರುವ ಹಿನ್ನೆಲೆಯಲ್ಲಿ ಇಡೀ ಮಂಗಳೂರಿನ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮೌಲ್ಯಮಾಪನ ಹೇಗೆ?
ಭಾರತೀಯ ಗುಣಮಟ್ಟ ಸಮಿತಿ ಮುಖ್ಯಸ್ಥ ಅಭಿನವ್‌ ಯಾದವ್‌, ಗುಣಮಟ್ಟ ನಿಯಂತ್ರಣ ಬಯಲು ಶೌಚಾಲಯ ಮುಕ್ತ ಸ್ಥಿತಿ ಪರಿಶೀಲಿಸಲು ಪ್ರತಿಯೊಂದು ನಗರಕ್ಕೂ ದಾಖಲಾತಿ ಪರಿಶೀಲನೆ ಹಾಗೂ ನೇರ ಪರಿಶೀಲನೆ ಎಂಬ ಎರಡು ದೀರ್ಘಾವಧಿ ಮೌಲ್ಯಮಾಪನ ನಡೆಸುತ್ತದೆ. ದಾಖಲಾತಿ ಪರಿಶೀಲನೆಯಡಿ ಹಿರಿಯ ಸಮೀಕ್ಷೆದಾರ ಯುಎಲ್‌ಬಿ ಕಚೇರಿಗೆ ಭೇಟಿ ನೀಡಿ ನಿಯಮಾವಳಿ ಸಮಯದಲ್ಲಿ ಪಡೆದ ಎಲ್ಲ ಘೋಷಣೆಗಳನ್ನು ಪರೀಕ್ಷಿಸುತ್ತಾರೆ. ಇದು ಪಟ್ಟಣದ ಮುಖ್ಯಸ್ಥರ ಘೋಷಣೆ, ವಾರ್ಡ್‌ ಕೌನ್ಸಿಲರ್‌ ಘೋಷಣೆ, ಶಾಲೆಯ ಘೋಷಣೆ ಮತ್ತು ಎಸ್‌ಎಚ್‌ಜಿ ಘೋಷಣೆಗಳನ್ನು ಒಳಗೊಂಡಿರುತ್ತದೆ. ಅಲ್ಲದೇ, ಗುಣಮಟ್ಟ ನಿಯಂತ್ರಣ ಸಮಿತಿ ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಲಾದ ಸಾರ್ವಜನಿಕ, ಸಮುದಾಯ ಶೌಚಾಲಯದ ನಿರ್ಮಾಣ, ಕಾರ್ಯ ಯೋಜನೆ, ಸಮೀಕ್ಷೆಗಳು ಸ್ವತ್ಛ ಭಾರತದ ಬಗ್ಗೆ ಹಾಗೂ ಬಯಲು ಶೌಚಾಲಯ ಮುಕ್ತತೆ ಬಗ್ಗೆ ಜಾಗೃತಿ ಹೆಚ್ಚಿಸಲು ಆಯೋಜಿಸಿದ ಆಂದೋಲನಗಳನ್ನು ಪರೀಕ್ಷಿಸಲಾಗುತ್ತದೆ. ನೇರ ಪರಿಶೀಲನೆಯಡಿ ಒಬ್ಬರು ಅಥವಾ ಇಬ್ಬರು ಸಮೀಕ್ಷೆದಾರರ ತಂಡ ಯಾದೃಚ್ಛಿಕವಾಗಿ ನಗರದ ಉದ್ದಗಲಕ್ಕೂ ಹರಡಿದ ಕೊಳಚೆ ಪ್ರದೇಶ, ಬಡಾವಣೆಗಳು, ಶಾಲೆ, ವಾಣಿಜ್ಯ ಸ್ಥಳಗಳು, ರೈಲು ನಿಲ್ದಾಣ, ಬಸ್‌ ನಿಲ್ದಾಣ, ನೀರಿನ ಮೂಲಧಿಗಳನ್ನು ಗಮನಿಸಲಾಗುತ್ತದೆ. ಸಮೀಕ್ಷೆಯಲ್ಲಿ ನೀಡಲಾದ ಬಯಲು ಶೌಚಾಲಯ ಮುಕ್ತತೆಯ ಸಂಭಾವ್ಯ ಸ್ಥಳಗಳನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ನಿಯಮಾವಳಿಗಳ ಪ್ರಕಾರ ಆಯ್ಕೆ ಮಾಡಲಾಗುತ್ತದೆ ಎಂದರು.

ಪಾಲಿಕೆ ಆಯುಕ್ತ ಮಹಮ್ಮದ್‌ ನಝೀರ್‌ ಪ್ರಸ್ತಾವನೆಗೈದು ಸ್ವಾಗತಿಸಿದರು. ಉಪಮೇಯರ್‌ ಸಮಿತ್ರಾ ಕರಿಯ ಉಪಸ್ಥಿತರಿದ್ದರು. ಪಾಲಿಕೆ ಸಚೇತಕ ಶಶಿಧರ್‌ ಹೆಗ್ಡೆ, ಕಾರ್ಪೋರೇಟರ್‌ಗಳು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಆರೋಗ್ಯಾಧಿಕಾರಿ ಮಧು ನಿರೂಪಿಸಿದರು.

ಕಠಿನ ಪರಿಶ್ರಮದ ಫಲ: ಸಂಸದ ನಳಿನ್‌
ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶ ರಾಮರಾಜ್ಯವಾಗಬೇಕೆಂಬ ಪರಿಕಲ್ಪನೆಯನ್ನು ಮಹಾತ್ಮಾ ಗಾಂಧೀ ಹೊಂದಿದ್ದರು. ರಾಮರಾಜ್ಯವೆಂದರೆ ಗ್ರಾಮಗಳ ಅಭಿವೃದ್ಧಿಯೊಂದಿಗೆ ರಾಷ್ಟ್ರದ ಅಭಿವೃದ್ಧಿ. ಸ್ವಾತಂತ್ರ್ಯದ ಬಳಿಕ ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯ ಅವರು ಅಂತ್ಯೋದಯದ ಪರಿಕಲ್ಪನೆ ನೀಡಿದರು. ಈ ಮಹಾನ್‌ ವ್ಯಕ್ತಿಗಳ ಜನ್ಮದಿನದ ಅಂತರಗಳ ನಡುವೆ ಸ್ವಚ್ಛತಾವಾರ ನಡೆಸಲಾಗುತ್ತಿದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೈ ಜೋಡಿಸಿದಲ್ಲಿ ಧ್ಯೇಯ ಪೂರ್ಣಗೊಳ್ಳಲು ಸಾಧ್ಯವೇ ಹೊರತು ಕೇವಲ ಜನಪ್ರತಿನಿಧಿಗಳಿಂದ, ಅಧಿಕಾರಿಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ. ನಗರ ಪಾಲಿಕೆಯ ಜನಪ್ರತಿನಿಧಿಗಳ, ಅಧಿಕಾರಿಗಳ ಕಠಿನ ಪರಿಶ್ರಮದ ಫಲವಾಗಿ ಈ ಪ್ರಶಸ್ತಿ ದೊರಕಿದೆ. ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಮಂಗಳೂರು ಪ್ರಥಮ ಸ್ಥಾನ ಬರುವಂತಾಗಲಿ ಎಂದರು.

ಸ್ಮಾರ್ಟ್‌ ಸಿಟಿಯ ಗರಿಯೊಂದಿಗೆ ಪಾಲಿಕೆಗೆ ಬಯಲು ಶೌಚ ಮುಕ್ತ ನಗರದ ಗರಿಯೂ ಸೇರಿಕೊಂಡಂತಾಗಿದೆ. ಜನರ ಸಹಾಯದಿಂದಲೇ ಇದು ಸಾಧ್ಯವಾಗಿದೆ. ಈ ಹಿಂದೆ ಶೌಚಾಲಯಕ್ಕಾಗಿ 339 ಅರ್ಜಿಗಳು ಪಾಲಿಕೆಯಲ್ಲಿದ್ದವು. ಅವುಗಳನ್ನು ಪರಿಶೀಲಿಸಿ ಇತ್ಯರ್ಥಗೊಳಿಸಲಾಗಿದೆ. 34 ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ ಹಾಗೂ ಈಗಾಗಲೇ 2 ಶೌಚಾಲಯಗಳನ್ನು  ನವೀಕರಣಗೊಳಿಸಿ ಉದ್ಘಾಟಿಸಲಾಗಿದೆ.
– ಕವಿತಾ ಸನಿಲ್‌, ಮನಪಾ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ 

Source : www.udayavani.com

Highslide for Wordpress Plugin