ಸುಬ್ರಹ್ಮಣ್ಯ: ಬಳ್ಪ ಗ್ರಾಮದ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳಿಗೆ ಸುಮಾರು 20 ಕೋಟಿ ರೂಪಾಯಿಯ ಯೋಜನೆ ಸಿದ್ದ ಮಾಡಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ವೇಗ ನೀಡಬೇಕು ಸಂಸದ ನಳಿನ್ ಕುಮಾರ್ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ಸಂಜೆ ಬಳ್ಪ ಗ್ರಾಮಕ್ಕೆ ಭೇಟಿ ನೀಡಿ ಪಂಚಾಯತ್‌ನಲ್ಲಿ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರೊಂದಿಗೆ ಮಾತುಕತೆ ನಡೆಸಿ ಕೇನ್ಯ ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲು, ಈಗಾಗಲೇ ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಗ್ರಾಮಕ್ಕೆ ಭೇಟಿ ನೀಡಲಾಗಿದೆ. ಇದರ ಜೊತೆಗೆ ಹೊಸಕಲ್ಪನೆಗಳ ಬಗ್ಗೆ ಗ್ರಾಮದ ಜನರೊಂದಿಗೆ ನೇರ ಸಂವಾದ ಮಾಡುವ ನಿಟ್ಟಿನಲ್ಲಿ ವಿವಿಧೆಡೆ ಭೇಟಿ ಮಾಡಲಾಗುತ್ತಿದೆ. ಈ ಗ್ರಾಮದಲ್ಲಿ ಮುಖ್ಯವಾಗಿ ರಸ್ತೆ, ವಿದ್ಯುತ್, ಇಂಟರ್ನೆಟ್ ಸಮಸ್ಯೆ ಇದೆ. ಇದರಲ್ಲಿ ಇಂಟರ್ನೆಟ್ ಸಮಸ್ಯೆ ಸರಿಪಡಿಸಲು ತಕ್ಷಣವೇ ಇಲಾಖೆಗೆ ಸೂಚಿಸಲಾಗುತ್ತದೆ. ಉಳಿದಂತೆ ವಿವಿಧ ಯೋಜನೆಗಳ ಮೂಲಕ ರಸ್ತೆ ಕಾಮಗಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸಂಸದರ ಅನುದಾನ, ಶಾಸಕರ ಅನುದಾನ ಬಳಕೆ ಮಾಡುವುದರ ಜೊತೆಗೆ ಸಿಎಸ್‌ಆರ್ ಫಂಡ್‌ಗಳನ್ನೂ ಬಳಕೆ ಮಾಡಲಾಗುತ್ತದೆ ಎಂದರು. ಈಗಾಗಲೇ ಸಹಕಾರಿ ಬ್ಯಾಂಕ್ ಕಟ್ಟಡ ರಚನೆಗೆ ಸಿದ್ದವಾಗುತ್ತಿದೆ, ಸಿಂಡಿಕೇಟ್ ಬ್ಯಾಂಕ್ ಸದ್ಯದಲ್ಲೇ ಉದ್ಘಾಟನೆಯಾಗಲಿದೆ. ಇದರ ಜೊತೆಗೆ ಇ-ಶಾಲೆ ವ್ಯವಸ್ಥೆ, ಅದರ ಜೊತೆಗೆ ಗೋಆಧಾರಿತ ಕೃಷಿಯನ್ನು ಮಾಡುವ ನಿಟ್ಟಿನಲ್ಲೂ ಚಿಂತನೆ ನಡೆಯುತ್ತಿದೆ, ಈ ಮೂಲಕ ಗೋಬರ್ ಗ್ಯಾಸ್, ಸ್ವಾವಲಂಬಿ ವಿದ್ಯುತ್ ಬಗ್ಗೆಯೂ ಕಾರ್ಯಯೋಜನೆ ಹಾಕಿಕೊಳ್ಳಲಾಗುತ್ತದೆ. ಸ್ವಉದ್ಯೋಗಕ್ಕೆ ತರಬೇತಿ ಕಾರ್ಯ ಆರಂಭಗೊಂಡಿದೆ, ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ ಎಂದರು.
ಈ ಸಂದರ್ಭ ಬ್ಯಾಂಕ್ ಕಟ್ಟಡ ನಿರ್ಮಾಣ, ತರಬೇತಿ ಕೇಂದ್ರ, ಸೋಲಾರ್ ಬೀದಿ ದೀಪ, ಆಸ್ಪತ್ರೆ ಕಟ್ಟಡ, ಬೀದಿಗುಡ್ಡೆ ರಸ್ತೆ, ಬಳ್ಪ ತ್ರಿಶೂಲಿನಿ ದೇವಸ್ಥಾನ, ಬೀದಿಗುಡ್ಡೆ ಭಜನಾಮಂದಿರ, ಬಳ್ಪ ಬೋಗಾಯನಕೆರೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಸದರು ಬಳ್ಪ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಬೀಡಿಗುಡ್ಡೆ ಪ್ರದೇಶಕ್ಕೆ ಆಗಮಿಸುವ ಬಸ್ ಕಳೆದ 5 ದಿನಗಳಿಂದ ರದ್ದಾಗಿರುವ ಬಗ್ಗೆ ಗ್ರಾಮಸ್ಥರು ಸಾಂಸದರ ಗಮನಕ್ಕೆ ತಂದರು. ತಕ್ಷಣವೇ ಪುತ್ತೂರು ವಿಭಾಗದ ಕೆಎಎಸ್‌ಆರ್‌ಟಿಸಿ ಡಿಸಿ ಜೊತೆ ದೂರವಾಣಿ ಮೂಲಕ ಮಾತನಾಡಿ, ತಕ್ಷಣವೇ ಬಸ್ ವ್ಯವಸ್ಥೆ ಮಾಡಬೇಕು, ಬಸ್ ಓಡಾಟ ಮಾಡದಷ್ಟು ರಸ್ತೆ ಹದಗೆಟ್ಟಿಲ್ಲ, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಿ ಎಂದರು. ಈ ಬಗ್ಗೆ ಉತ್ತರಿಸಿದ ಡಿಸಿ, ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಂಸದರ ಗ್ರಾಮ ಭೇಟಿ ವೇಳೆ ಆದರ್ಶ ಗ್ರಾಮ ಯೋಜನಾಧಿಕಾರಿ ಲೋಕೇಶ್, ಬಳ್ಪ ಗ್ರಾಪಂ ಅಧ್ಯಕ್ಷ ಪ್ರಕಾಶ್ ಮಾಡ್ನೂರು, ಬಳ್ಪ ಗ್ರಾಪಂ ಪಿಡಿಒ ಶಂಭ ಕುಮಾರ್ ಶರ್ಮ, ಬಳ್ಪ ಗ್ರಾಪಂ ಉಪಾಧ್ಯಕ್ಷೆ ತಾರಾ ರೈ ಬರ್ಕಿ, ಪ್ರಮುಖರಾದ ರಮಾನಂದ ಎಣ್ಣೆಮಜಲು, ಸುಬ್ರಹ್ಮಣ್ಯ ಕುಳ, ಭಾಸ್ಕರ ಗೌಡ ಪಂಡಿ, ಧರ್ಮಪಾಲ ಕಣ್ಕಲ್, ವಿನೋದ್ ಬೊಳ್ಮಲೆ, ಲೋಕೇಶ್ ಕಟ್ಟ, ಯಮುನಾ ಕಾರ್ಜ, ಬೇಬಿ ಭಾಸ್ಕರ ಕಟ್ಟ, ನಿಲೇಶ್ವರ ನಾಳ ಮೊದಲಾದವರು ಉಪಸ್ಥಿತರಿದ್ದರು.