ಪುತ್ತೂರು: ರಾಜ್ಯ ಸರ್ಕಾರದಲ್ಲಿ ಶಾಸಕರು ಸಂಪುಟ ವಿಸ್ತರಣೆ ಯಾವಾಗ ನಡೆಯುತ್ತದೆ ಎಂದು ಕಾಯುತ್ತಿದ್ದಾರೆ. ಪರಮೇಶ್ವರ ಡಿಸಿಎಂ ಪಟ್ಟಕ್ಕಾಗಿ ಕಾಲೆಳೆಯುತ್ತಾರೆ ಎಂಬ ಭಯದಲ್ಲಿದ್ದಾರೆ ಸಿಎಂ. ಸಚಿವರು ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಕೃಷಿಕರ ಸಮಸ್ಯೆ ಬಗ್ಗೆ ಗಮನಹರಿಸಲು ರಾಜ್ಯ ಸರ್ಕಾರಕ್ಕೆ ಪುರುಸೊತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ವಿಪರೀತ ಮಳೆಯಿಂದಾಗಿ ಬಾಳೆ, ಅಡಕೆ ಕೃಷಿ ಹುಳರೋಗ, ಹಳದಿ ರೋಗ, ನುಸಿರೋಗಕ್ಕೆ ತುತ್ತಾಗಿದೆ. ರೈತರು ಕಂಗಾಲಾಗಿದ್ದರೂ, ರಾಜ್ಯ ಸರ್ಕಾರ ನಿದ್ದೆಯಲ್ಲಿದೆ. ಕೂಡಲೇ ವೈಜ್ಞಾನಿಕ ಸಮೀಕ್ಷೆ ನಡೆಸಿ, ಅನುದಾನ ಬಿಡುಗಡೆ ಮಾಡಬೇಕು ಎಂದರು.ರಾಜ್ಯ ಸರ್ಕಾರ ಕೃಷಿಕರಿಗೆ ಪೂರಕವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ನಿದ್ರಾವಸ್ಥೆಯಲ್ಲಿರುವ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ರಾಜ್ಯದ ಅಧಿಕಾರಿಗಳ ತಂಡದಿಂದ ವೈಜ್ಞಾನಿಕ ಸಮೀಕ್ಷೆ ನಡೆಸಿ ಪರಿಹಾರ ಧನ ಮಂಜೂರು ಮಾಡಬೇಕು. ಕೇಂದ್ರಕ್ಕೆ ವರದಿ ಸಲ್ಲಿಸಿ, ಅನುದಾನ ನೀಡಲು ಮನವಿ ಮಾಡಬೇಕು. ರಾಜ್ಯ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಕೇಂದ್ರ ಅನುದಾನ ಬಿಡುಗಡೆ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸಂಜೀವ ಮಟಂದೂರು, ಅಪ್ಪಯ್ಯ ಮಣಿಯಾಣಿ, ಶಂಭು ಭಟ್, ಸಾಜ ರಾಧಾಕೃಷ್ಣ ಆಳ್ವ, ಚನಿಲ ತಿಮ್ಮಪ್ಪ ಶೆಟ್ಟಿ ಮೊದಲಾದವರಿದ್ದರು.