ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಸ್ಮಾರ್ಟ್ಸಿಟಿಗೆ ಮಂಗಳೂರು ಆಯ್ಕೆಯಾಗಿರುವ ಕಾರಣದಿಂದ ಮುಂದಿನ 20 ವರ್ಷಗಳಲ್ಲಿ 40,000 ಕೋ. ರೂ. ಇಲ್ಲಿ ಹೂಡಿಕೆಯಾಗುವ ನಿರೀಕ್ಷೆ ಇದೆ. ಈ ಮೂಲಕ ಮಂಗಳೂರು ಗ್ಲೋಬಲ್ ಸಿಟಿಯಾಗಿ ಮೂಡಿಬರಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಯಲ್ಲಿ ಬ್ರೌನ್ ಹಾಗೂ ಗ್ರೀನ್ ಎಂಬ ವರ್ಗವಿದೆ. ಅದರಲ್ಲಿ ಮಂಗಳೂರು ಬ್ರೌನ್ ವಿಭಾಗದಡಿ ಆಯ್ಕೆಯಾಗಿದೆ. ಅದರಲ್ಲಿ ಪ್ಯಾನ್ಸಿಟಿ ಹಾಗೂ ವಲಯಾಧಾರಿತ ಅಭಿವೃದ್ಧಿ ನಡೆಯಲಿದೆ. ಇಲ್ಲಿ ಬಿಲ್ಡರ್ಗಳಿಗೆ ಲಾಭವಾಗುವ ಪ್ರಮೇಯವಿಲ್ಲ, ಎಲ್ಲರಿಂದ ಎಲ್ಲರಿಗೆ ರಚಿತವಾಗುವ ನಗರವಿದು. ಹಳೆಬಂದರಿನಿಂದ ತೊಡಗಿ ಉಳಿದ ಕಡೆಗಳಿಗೆ ಅಭಿವೃದ್ಧಿ ವಿಸ್ತರಣೆಯಾಗಲಿದೆ ಎಂದರು.
10 ವರ್ಷಗಳಲ್ಲಿ 8,000 ಕೋ. ರೂ. ಹೂಡಿಕೆ ನಿರೀಕ್ಷೆ ಯೋಜಿತ ಪ್ರಸ್ತಾವದಂತೆ, ಪ್ಯಾನ್ ಸಿಟಿ 5-10 ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ವಲಯಾಧಾರಿತ ಅಭಿವೃದ್ಧಿ 15-20 ವರ್ಷ ತೆಗೆದುಕೊಳ್ಳಲಿದೆ. ಒಟ್ಟು 40,000 ಕೋ. ರೂ. ಮೊತ್ತ ಹೂಡಿಕೆಯಾಗಲಿದೆ. ಸರಕಾರಗಳಿಂದ ಎಡಿಬಿ, ಅಮೃತ್ ಮುಂತಾದ ವಿವಿಧ ಯೋಜನೆಯಡಿ ಹಣ ನೀಡುವುದಲ್ಲದೆ, ಪಿಪಿಪಿ ಆಧಾರದಲ್ಲೂ ಹಣ ಲಭ್ಯವಾಗಲಿದೆ. ಮುಂದಿನ 10 ವರ್ಷದಲ್ಲಿ 8,000 ಕೋಟಿರೂ. ಬರುವ ನಿರೀಕ್ಷೆ ಇದೆ ಎಂದರು.
ಕೇಂದ್ರ, ರಾಜ್ಯ ಸರಕಾರ, ಶಾಸಕ ಲೋಬೋ, ಮನಪಾ ಆಡಳಿತ/ವಿಪಕ್ಷ, ಮಂಗಳೂರು ಜನತೆ ಸೇರಿದಂತೆ ಸರ್ವರ ನೆರವಿನಿಂದ ಮಂಗಳೂರು ಸ್ಮಾರ್ಟ್ಸಿಟಿಯಾಗಿ ರೂಪುಗೊಂಡಿದೆ. ಇದು ಯಾವುದೇ ಪಕ್ಷದ ರಾಜಕೀಯ ಕಾರ್ಯಕ್ರಮವಲ್ಲ. ಬದಲಾಗಿ ಮಂಗಳೂರಿನ ಸಮಗ್ರ ಅಭಿವೃದ್ಧಿಯೇ ಮುಖ್ಯ ಧ್ಯೇಯ ಎಂದು ಅವರು ಹೇಳಿದರು.
ಬಳ್ಪ: ಶೇ. 40 ಕಾಮಗಾರಿ ಪೂರ್ಣ
ಕೇಂದ್ರ ಸರಕಾರದ ಆದರ್ಶ ಗ್ರಾಮ ಅನುಷ್ಠಾನದ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಸುಳ್ಯದ ಬಳ್ಪ ಗ್ರಾಮದಲ್ಲಿ ಶೇ. 40ರಷ್ಟು ಕಾಮಗಾರಿಗಳು ಮೊದಲ ಹಂತದಲ್ಲಿ ಪೂರ್ಣಗೊಂಡಿವೆ. 5 ಹಂತಗಳಲ್ಲಿ ಇಲ್ಲಿ ಅಭಿವೃದ್ಧಿ ಯೋಜನೆ ಹಾಕಿಕೊಳ್ಳಲಾಗಿದ್ದು , 2ನೇ ಹಂತದ ಅಭಿವೃದ್ಧಿ ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಗ್ರಾಮದ 37 ಪ್ರದೇಶಗಳಲ್ಲಿ ಸೋಲಾರ್ ಬೀದಿ ದೀಪ, 2 ಆಸ್ಪತ್ರೆಗಳ ಉನ್ನತೀಕರಣ, 6 ಶಾಲೆಗಳಲ್ಲಿ ಇ-ಶಿಕ್ಷಣ, ಬ್ಯಾಂಕ್ ಹಾಗೂ ಸೊಸೈಟಿ ಸ್ಥಾಪನೆ, ಬೀಡಿನಗುಡ್ಡೆಯಲ್ಲಿ ರಸ್ತೆ ನಿರ್ಮಾಣ, ಮದ್ಯವರ್ಜನ ಶಿಬಿರ, ಭಜನ ಕಮ್ಮಟ, 3 ದಿನಕ್ಕೆ ಒಮ್ಮೆ ಉಚಿತ ಆರೋಗ್ಯ ಶಿಬಿರ, ಆರೋಗ್ಯ ಕಾರ್ಡ್, 60 ಜನರಿಗೆ ಕಂಪ್ಯೂಟರ್ ತರಬೇತಿ, 160 ಜನರಿಗೆ ಟೈಲರಿಂಗ್ ತರಬೇತಿ, ಜೇನುಕೃಷಿ ತರಬೇತಿ, ಗೋ ಆಧಾರಿತ ಗ್ಯಾಸ್ ಯೋಜನೆ, ಪ್ರತೀ 5 ಮನೆಗೆ 1 ಸ್ವಸಹಾಯ ತಂಡ ರಚನೆ ಮಾಡಲಾಗಿದೆ. ಆ ಮೂಲಕ ಪ್ರತೀ ಮನೆಯ ಸಮಸ್ಯೆ-ಸವಾಲುಗಳ ಇತ್ಯರ್ಥ ಸೇರಿದಂತೆ ಹಲವು ಯೋಜನೆ ಮೊದಲ ಹಂತದಲ್ಲಿ ವಿವಿಧ ಸಂಘ- ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಮೂಲಕ ನಡೆಸಲಾಗಿದೆ. 2ನೇ ಹಂತದಲ್ಲಿ 5 ಸುಸಜ್ಜಿತ ಬಸ್ನಿಲ್ದಾಣ, ವಿಧಾನ ಸೌಧದ ಮಾದರಿಯಲ್ಲಿ ಗ್ರಾ.ಪಂ. ಕಚೇರಿ ಕಟ್ಟಡ ನಿರ್ಮಾಣ, ಉದ್ಯಾನವನ/ಧ್ಯಾನ ಮಂದಿರ , ಎಲ್ಲ ರಸ್ತೆಗಳಿಗೆ ಡಾಮರು ಭಾಗ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಮನಪಾ ಉಪ ಮೇಯರ್ ಸುಮಿತ್ರ ಕರಿಯ, ವಿಪಕ್ಷ ನಾಯಕಿ ರೂಪಾ ಬಂಗೇರ, ವಿಧಾನ ಸಭಾ ಮಾಜಿ ಉಪ ಸಭಾಪತಿ ಎನ್. ಯೋಗೀಶ್ ಭಟ್, ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.
ದ.ಕ: 8,293.28 ಕೋ. ರೂ. ಅನುದಾನ ಬಿಡುಗಡೆ
ದ.ಕ. ಜಿಲ್ಲೆಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರಕಾರದಿಂದ ಒಟ್ಟು 8,293.28 ಕೋ. ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ರೈಲ್ವೇ ಇಲಾಖೆಗೆ 1,053.93 ಕೋ. ರೂ., ರಾ.ಹೆ. ಹೆದ್ದಾರಿಗೆ 5732 ಕೋ. ರೂ., ದ.ಕ. ಜಿ.ಪಂ.ಗೆ 114 ಕೋ. ರೂ., ಆರೋಗ್ಯ ಇಲಾಖೆಗೆ 22 ಕೋ. ರೂ., ಶಿಕ್ಷಣ ಇಲಾಖೆಗೆ (ಎಸ್.ಎಸ್.ಎ., ಆರ್.ಎಂ.ಎಸ್.) 32.28 ಕೋ. ರೂ., ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ 12.50 ಕೋ. ರೂ., ಬಂದರು ಮತ್ತು ಮೀನುಗಾರಿಕೆ ಇಲಾಖೆಗೆ (ಧಿಜೆಟ್ಟಿ ನಿರ್ಮಾಣ)230 ಕೋ. ರೂ., ಮಂಗಳೂರು ಮಹಾನಗರ ಪಾಲಿಕೆ ವಿವಿಧ ಕಾಮಗಾರಿಗಳಿಗೆ 959.21 ಕೋ.ರೂ., ಲೋಕೋಪಯೋಗಿ ಇಲಾಖೆಗೆ 9.05 ಕೋ.ರೂ., ಪ್ರಧಾನಮಂತ್ರಿ ಗ್ರಾಮ ಸಡಕ್ನಲ್ಲಿ 54 ಕೋ.ರೂ., ನಬಾರ್ಡ್ ಯೋಜನೆಗೆ 25.63 ಕೋ.ರೂ. ತೋಟಗಾರಿಕೆ/ಕೃಷಿ ಇಲಾಖೆಗೆ 4.16 ಕೋ.ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 24.75 ಕೋ.ರೂ., ಪಿಲಿಕುಳ ನಿಸರ್ಗಧಾಮಕ್ಕೆ 5 ಕೋ. ರೂ., ಪ್ರವಾಸೋದ್ಯಮ ಇಲಾಖೆ ಬೀಚ್ಗಳ ಅಭಿವೃದ್ಧಿಗೆ 13.72 ಕೋ. ರೂ., ಕದ್ರಿ ದೇವಸ್ಥಾನ ಮೂಲಸೌಕರ್ಯಕ್ಕೆ 0.95 ಕೋ. ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ದ.ಕ. ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯ: ಪ್ರಧಾನಿ ಒಲವು
ಇತ್ತೀಚೆಗೆ ಕಲ್ಲಿಕೋಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ವೇಳೆ ಪ್ರಧಾನಿ ಮೋದಿ ಅವರ ಜತೆಗೆ ದ.ಕ. ಜಿಲ್ಲೆಯಲ್ಲಿ ಆಗಬೇಕಾದ ಯೋಜನೆಗಳ ಬಗ್ಗೆ ಉಲ್ಲೇಖೀಸಿದ್ದೇನೆ. ಅದರಲ್ಲಿ ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ರೈತರಿಗೆ ಉತ್ತಮ ಆದಾಯ ತರುವ ಉದ್ದೇಶದಿಂದ ಎಸ್ಎಝಡ್ (ವಿಶೇಷ ಕೃಷಿ ವಲಯ) ರೂಪಿಸುವ ಉದ್ದೇಶವನ್ನು ಅವರಲ್ಲಿ ಹಂಚಿಕೊಂಡಿದ್ದೇನೆ. ಯೋಜನೆ ರೂಪಿಸಿ ತನಗೇ ಅದರ ಪ್ರತಿ ನೀಡುವಂತೆ ಪ್ರಧಾನಿ ಅವರು ತಿಳಿಸಿದ್ದಾರೆ. ಇದು ಸಾಧ್ಯವಾದರೆ, ರೈತರೊಂದಿಗೆ ಕಂಪೆನಿಗಳು ಒಪ್ಪಂದ ಮಾಡಿಕೊಂಡು, ಅವರ ಭೂಮಿಯ ಮಣ್ಣು ಪರೀಕ್ಷೆ ಮಾಡಿ ಅಲ್ಲಿಗೆ ಸೂಕ್ತವಾಗುವ ಬೆಳೆ ಬೆಳೆಯುವುದಕ್ಕೆ ಎಲ್ಲ ಅನುಕೂಲ ಮಾಡಿಕೊಡಲಾಗುತ್ತದೆ. ಬೆಳೆದ ಬಳಿಕ ಖರೀದಿಯನ್ನೂ ಮಾಡುವ ಯೋಜನೆ ಇದರಲ್ಲಿರಲಿದೆ. ಒಂದು ನಿಗದಿತ ಸ್ಥಳವನ್ನು ಇದಕ್ಕಾಗಿ ಗುರುತಿಸಿ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು. – ಸಂಸದ ನಳಿನ್ ಕುಮಾರ್ ಕಟೀಲು
Source : www.udayavani.com