ಪುತ್ತೂರು: ಬಿಜೆಪಿ ನೇತೃತ್ವದ ಸರಕಾರ ಆಡಳಿತದಲ್ಲಿ ಇರುವಾಗ ಎಪಿಎಲ್, ಬಿಪಿಎಲ್ ಎಂಬ ಬೇಧ ಮಾಡದೆ ಎಲ್ಲರಿಗೂ ಅಕ್ಕಿಯನ್ನು ನೀಡಿತ್ತು. ಇದರಲ್ಲಿ ಬಡವರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಣೆ ಮಾಡಿತ್ತು. ಆದರೆ ಇಂದು ರಾಜ್ಯ ಸರಕಾರ ರಾಜಕೀಯ ದುರುದ್ಧೇಶದಿಂದ ಚುನಾವಣೆಯ ಗಿಮಿಕ್ನಿಂದ ಎಪಿಎಲ್ ಕಾರ್ಡುದಾರರಿಗೆ ವಂಚನೆ ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಪುತ್ತೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಳಿನ್,ಇಂದು ಘೋಷಣೆ ಮಾಡಿ ಯೋಜನೆ ಜಾರಿ ಮಾಡಲು ಸಾಧ್ಯವಾಗದೆ ಎಪಿಎಲ್ ಕಾರ್ಡ್ದಾರರ ಅಕ್ಕಿಯನ್ನು ಕಸಿಯುವುದು ಸರಿಯಲ್ಲ.ಇದರ ಜೊತೆಗೆ ಬಿಪಿಎಲ್ ಕಾರ್ಡ್ ಇದ್ದವರನ್ನೂ ಎಪಿಎಲ್ ಮಾಡುವ ಕೆಲಸ ಮಾಡುತ್ತದೆ. ಇದರಿಂದ ಸಾಮಾನ್ಯ ಜನರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡಿದೆ.ಇದು ಸರಿಯಲ್ಲ ಬಿಜೆಪಿಯು ಎಲ್ಲರಿಗೂ ಅಕ್ಕಿಯನ್ನು ನೀಡಬೇಕು ಎಂದು ಒತ್ತಾಯಿಸುತ್ತದೆ. ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳದೇ ಇದ್ದರೆ ಬಿಜೆಪಿ ಪ್ರತಿಭಟನೆ ಮಾಡುತ್ತದೆ ಎಂದು ನಳಿನ್ ಹೇಳಿದರು. ಜಿಲ್ಲೆಯ ಪ್ರಮುಖ ಕೃಷಿಯಾದ ಅಡಿಕೆ ಬೆಳೆಗೆ ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಕೊಳೆರೋಗ ಬಾಧಿಸಿ ಈಗಾಗಲೇ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಕ್ಷಣವೇ ಕೊಳೆರೋಗಕ್ಕೆ ಸೂಕ್ತ ಪರಿಹಾರ, ಬೆಂಬಲ ಬೆಲೆ ಘೋಷಿಸುವ ಮೂಲಕ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ಇದೇ ವೇಳೆ ನಳಿನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಕ್ಷೇತ್ರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಪ್ರಧಾನ ಕಾರ್ಯದರ್ಶಿ ಜಯರಾಮ ಪೂಜಾರಿ, ರಾಜೀವ ಭಂಡಾರಿ, ಪುರಸಭಾ ಸದಸ್ಯ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.