ಎಲ್ಲಾ ಸಮಸ್ಯೆಗಳಿಗೂ ಮೋದಿಯೇ ಉತ್ತರ: ಸದಾನಂದ ಗೌಡ
ದೇಶ ಆರ್ಥಿಕ ಸಂಕಷ್ಟ, ಗಡಿ ಸಮಸ್ಯೆ, ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದ್ದರೂ ಕಾಂಗ್ರೇಸ್ ಸರ್ಕಾರ ಏನು ಮಾಡಲಾಗದ ಸ್ಥಿತಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ನಗರದ ವಾಮಂಜೂರಿನಲ್ಲಿ ಬಿಜೆಪಿ ಪಾದಾಯಾತ್ರೆ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, ’12 ವರ್ಷದ ಹಿಂದೆ ಗುಜರಾತ್ ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಇಂದು ಪ್ರಪಂಚದ ಮೂಲೆ ಮೂಲೆಗೂ ಗುಜರಾತ್ ತಿಳಿದಿದೆ. ಜಗತ್ತಲ್ಲೇ ಅದು ಅಭಿವೃದ್ಧಿ ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಕ್ಕೆ ಮೋದಿ ಮಾಡಿದ ಅಭಿವೃದ್ಧಿಯೇ ಕಾರಣ’ ಎಂದರು.
ಕಾಂಗ್ರೆಸ್ ಬಾಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡದೆ, ಕೃತಿಯಲ್ಲೂ ಅಭಿವೃದ್ಧಿ ಮಾಡಿ ತೋರಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.
ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ಆಡಳಿತವನ್ನು ಲೋಕಾಯುಕ್ತರು ಶ್ಲಾಘಿಸಿದ್ದರು, ಆದರೀಗ ಕಾಂಗ್ರೆಸ್ ಆಡಳಿತದ ವಿರುದ್ಧ ರಾಜ್ಯಪಾಲರು, ಲೋಕಾಯುಕ್ತರು ದೂರುತ್ತಿದ್ದಾರೆ ಎಂದರು.
ಈ ಎಲ್ಲಡೆಯೂ ಬಿಜೆಪಿ ಹೊಸ ರೀತಿಯ ರಾಜಕಾರಣ ಪ್ರಾರಂಭ ಮಾಡಿದೆ. 300 ಕ್ಕೂ ಹೆಚ್ಚು ಸಮಾವೇಶಗಳನ್ನು ಮಾಡಿದ್ದು, ಗಡಿ, ಆಂತರಿಕ ಭದ್ರತೆಗಳನ್ನು ಒದಗಿಸುವ ನಾಯಕತ್ವವನ್ನು ರೂಪಿಸಬೇಕಾಗಿದೆ. ಮೋದಿ ಇಡೀ ರಾಷ್ಟ್ರವೇ ಒಪ್ಪುವಂತ ನಾಯಕನಾಗಿದ್ದಾರೆ, ಇದು ಮಾಧ್ಯಮಗಳ ಸರ್ವೇಯಿಂದ ರುಜುವಾತಾಗಿದೆ ಎಂದರು.
ಈ ಹಿಂದೆ ನಡೆದ ಸ್ವಾತಂತ್ರ್ಯ ಸಂಗ್ರಾಮ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಷ್ಟೇ ಈ ಚುನಾವಣೆ ಮಹತ್ವದ್ದಾಗಿದೆ. ದೇಶ ಉಳಿಸಿದರೆ ನಾವು ಉಳಿದೇವು ಎಂಬ ನಿಟ್ಟಿನಲ್ಲಿ ಭಾರತ ಗೆಲ್ಲಿಸಿ ಎಂದು ಸಮಾವೇಶಕ್ಕೆ ಹೆಸರಿಡಲಾಗಿದೆ. ಮೋದಿಯವರು ಸರ್ವ ಸಮಸ್ಯೆಗಳಿಗೂ ಪರಿಹಾರ ಎಂದರು.
ಈ ಸಂದರ್ಭ ಮಾತನಾಡಿದ ಕಟೀಲ್ ‘ತನಗೆ ಸಂಸತ್ತಿನಲ್ಲಿ 24 ನೇಯ ಸ್ಥಾನ ದೊರೆತಿದೆ. ಚರ್ಚೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದೇನೆ, ಅನುದಾನಗಳನ್ನು ಸಮಪರ್ಕವಾಗಿ ಬಳಸಿಕೊಂಡಿದ್ದೇನೆ, ಹಲವು ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಎತ್ತಿದ್ದೇನೆ, ಕಾಂಗ್ರೆಸ್ ನನ್ನ ವಿರುದ್ಧ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೂ ನನ್ನ ಕಾರ್ಯವೇ ಉತ್ತರ’ ಎಂದರು.