ಸುಳ್ಯ: ದೇಶದ ಸಮಸ್ಯೆಯ ಪರಿಹಾರಕ್ಕೆ, ದೇಶದ ಭವಿಷ್ಯಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕಾದ ಅನಿವಾರ್ಯತೆಯಿದೆ. ದೇಶದ ಭವಿಷ್ಯಕ್ಕೆ ಯುವ ಸಮೂಹ ಬಿಜೆಪಿ ಬೆಂಬಲಿಸಬೇಕು ಎಂದು ದಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ಕುಮಾರ್ ಕಟೀಲ್ ಕರೆ ನೀಡಿದ್ದಾರೆ. ಸುಳ್ಯದ ಕೆವಿಜಿ ಕ್ಯಾಂಪಸ್ನಲ್ಲಿ ಮತ ಯಾಚನೆ ನಡೆಸಿ ಅವರು ಮಾತನಾಡಿದರು.
ಬುಧವಾರ ನಳಿನ್ಕುಮಾರ್ ಕಟೀಲ್ ಕೆವಿಜಿ ಕ್ಯಾಂಪಸ್ನಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡರು. ಸುಳ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಅವರು ಕೆವಿಜಿ ಇಂಜಿನಿಯರಿಂಗ್ ಕಾಲೇಜು, ಕೆವಿಜಿ ಮೆಡಿಕಲ್ ಕಾಲೇಜು, ಕೆವಿಜಿ ಡೆಂಟಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಮತ್ತು ಕಾಲೇಜಿನ ಉಪನ್ಯಾಸಕ, ಸಿಬ್ಬಂದಿ ವರ್ಗದವರನ್ನು ಭೇಟಿ ಮಾಡಿ ಮತ ಯಾಚನೆ ನಡೆಸಿದರು. ಅನುಭವದ ಕೊರತೆಯಿದ್ದರೂ ಕಳೆದ ಐದು ವರ್ಷಗಳಲ್ಲಿ ಉತ್ತಮ ಕೆಲಸವನ್ನು ಮಾಡಿ ಎಲ್ಲಾ ಅನುದಾನವನ್ನೂ ವಿನಿಯೋಗಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ನಡೆಸಿದ್ದೇನೆ. ಅಭಿವೃದ್ಧಿ ಕಾರ್ಯವನ್ನು ಮುಂದುವರಿಸಲು ಯುವ ಸಮೂಹ ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.
ಬೆಳಿಗ್ಗೆ ಎಡಮಂಗಲದಿಂದ ಸುಳ್ಯ ಕ್ಷೇತ್ರದ ಪ್ರವಾಸ ಆರಂಭಿಸಿದ ನಳಿನ್ಕುಮಾರ್ ಬಾಳಿಲ, ಕೊಡಿಯಾಲ, ಬೆಳ್ಳಾರೆ, ಸುಳ್ಯಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಕಾರ್ಯಕರ್ತರ ಸಭೆ ನಡೆಸಿದ ಅವರು ಅಲ್ಲಲ್ಲಿ ಪ್ರಮುಖ ಕೇಂದ್ರಗಳಲ್ಲಿ ಮತ ಯಾಚನೆ ನಡೆಸಿದರು.
ದೇವಾಲಯ ದರ್ಶನ:
ನಳಿನ್ಕುಮಾರ್ ಕಟೀಲ್ ಎಡಮಂಗಲದ ಪಂಚಲಿಂಗೇಶ್ವರ ಕ್ಷೇತ್ರ, ಮಾಣಿಮಜಲು ಗರಡಿ, ಬೆಳ್ಳಾರೆ ವೆಂಕಟ್ರಮಣ ದೇವಸ್ಥಾನ, ಬೆಳ್ಳಾರೆ ಮಹಾಲಿಂಗೇಶ್ವರ ಕ್ಷೇತ್ರ, ಸುಳ್ಯದ ಬೂಡು ಭಗವತಿ ದೈವಸ್ಥಾನ, ವೆಂಕಟರಮಣ ದೇವಮಂದಿರಗಳಲ್ಲಿ ಭೇಟಿ ನೀಡಿ ದರ್ಶನ ಪಡೆದರು. ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್ಗೆ ಭೇಟಿ ನೀಡಿ ಫಾ.ವಿನ್ಸೆಂಟ್ ಡಿಸೋಜ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಪಿಜಿಎಸ್ಎನ್ ಪ್ರಸಾದ್, ಎನ್.ಎ.ರಾಮಚಂದ್ರ, ಪ್ರಕಾಶ್ ಹೆಗ್ಡೆ, ಐ.ಬಿ.ಚಂದ್ರಶೇಖರ, ಸೋಮನಾಥ ಪೂಜಾರಿ, ಬೂಡು ರಾಧಾಕೃಷ್ಣ, ದಶರಥ, ಕೃಪಾಶಂಕರ ತುದಿಯಡ್ಕ, ಬೂಡು ರಾಧಾಕೃಷ್ಣ ಮತ್ತಿತರರು ನಳಿನ್ಕುಮಾರ್ ಜೊತೆಯಲ್ಲಿದ್ದರು.