ಪುತ್ತೂರು: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದವರು. ಗ್ರಾಮೀಣ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಕ್ರೀಡೆಯೂ ಜಗತ್ತಿನ ಎತ್ತರಕ್ಕೆ ಬೆಳೆಯುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯ ಕಾನೂನು ವಿಶ್ವವಿದ್ಯಾಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯ ಹಾಗೂ ವಿವಿ ತಂಡ ಆಯ್ಕೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕ್ರಿಕೆಟ್ನ ಮನ್ನಣೆ ಕಬಡ್ಡಿಗಿಲ್ಲ ಎಂಬ ಕೊರಗಿತ್ತು. ಆದರೆ ಪ್ರೊ ಕಬಡ್ಡಿ ಆ ಕೊರತೆಯನ್ನು ನೀಗಿಸಿದ್ದು, ಕಬಡ್ಡಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದೆ. ಶಾರೀರಿಕ, ಬೌದ್ಧಿಕ ಮಟ್ಟ ಏರಿಕೆಗೆ ಅಗತ್ಯವಾದ ಕಬಡ್ಡಿಯಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಸಾಕಷ್ಟು ಅವಕಾಶಗಳಿವೆ. ದೇಶದ ಕೀರ್ತಿಯನ್ನು ಎತ್ತರಿಸುವ ಕ್ರೀಡಾಳುಗಳು ಇಂತಹ ವೇದಿಕೆಗಳಿಂದ ಹೊರಹೊಮ್ಮಲಿ ಎಂದರು.
ಭಗಿನಿ ನಿವೇದಿತಾಳ ಜನ್ಮದಿನದಂದೇ ಕಬಡ್ಡಿ ಆಯೋಜಿಸಿರುವುದು ವಿಶೇಷ. ಭಾರತ ದೇಶವನ್ನು, ಕಬಡ್ಡಿ ಆಟವನ್ನು ಪೂಜಿಸಿದ ತಾಯಿ ನಿವೇದಿತಾ. ಆದ್ದರಿಂದ ಇಂದಿನ ಕಬಡ್ಡಿ ಪಂದ್ಯ ಎಲ್ಲಾ ಕಾರ್ಯಕ್ರಮಕ್ಕಿಂತಲೂ ಮಿಗಿಲು ಎಂದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಬಲರಾಮ ಆಚಾರ್ಯ ಮಾತನಾಡಿ, ಕಬಡ್ಡಿ ಭಾವುಕತೆಯ ಆಟ. ಮಾದರಿ ಆಗುವಂತೆ ಆಡುವುದು ಕ್ರೀಡಾಳುಗಳ, ಸಂಘಟಕರ ಹಿರಿಮೆ ಎಂದರು.
ಪುರಸಭಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಕೊನೆಯಲ್ಲಿ ಎದುರಾಗುವ ಒತ್ತಡದ ಆಟ ಜೀವನದ ಪ್ರತೀಕ. ಇಂತಹ ಸಂದರ್ಭದಲ್ಲೂ ಮುನ್ನುಗ್ಗುವ ವ್ಯಕ್ತಿಗಳಿಗೆ ಭಗವಂತನ ಅನುಗ್ರಹ ಇರುತ್ತದೆ ಎಂದರು.
ಪುರಸಭೆ ಉಪಾಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಬ್ರಿಟಿಷರು ಬಿಟ್ಟು ಹೋದ ಕ್ರಿಕೆಟಿಗೆ ಸರಿಸಮನಾಗಿ ಗ್ರಾಮೀಣ ಆಟ ಕಬಡ್ಡಿ ಬೆಳೆದು ನಿಂತಿದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಶಿವಪ್ರಸಾದ್ ಈ ಮಾತನಾಡಿ, ಕಬಡ್ಡಿ ಭಾರತ ಭೂಮಿಗೆ ವಂದಿಸುವ ಆಟ. ಇದು ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ ಎಂದರು.
ರಾಜ್ಯ ಕಾನೂನು ವಿವಿ ಕ್ರೀಡಾ ನಿರ್ದೇಶಕ ಖಾಲಿದ್ ಬಿ. ಖಾನ್ ಮಾತನಾಡಿ, ಕ್ರೀಡೆ ಎಂದರೆ ತ್ಯಾಗ. ಗೆಲುವೇ ಕ್ರೀಡೆಯಲ್ಲಿ ಮುಖ್ಯ ಅಲ್ಲ ಎಂದ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ತಾಪಂ ಅಧ್ಯಕ್ಷೆ ಪುಲಸ್ತ್ಯಾ ರೈ, ಪುತ್ತೂರು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಸ್ವಾಗತ ಸಮಿತಿಯ ಸುರೇಂದ್ರ ರೈ, ಕಾಲೇಜು ಸಂಚಾಲಕ ಸಂತೋಷ್, ಕಾಲೇಜು ಪ್ರಾಂಶುಪಾಲ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ವಿವಿ ಕಾನೂನು ಮಟ್ಟದ ಕಬಡ್ಡಿ ಪಂದ್ಯದ ವಿಜೇತ ತಂಡದ ಕೋಚ್ ಹಬೀಬ್ ಮಾಣಿ ಅವರನ್ನು ಸನ್ಮಾನಿಸಲಾಯಿತು. ಗೌತಮ್, ಗಿರೀಶ್, ನವಾಜ್ ಷರೀಫ್ ಅನಿಸಿಕೆ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಕಾನೂನು ಕಾಲೇಜುಗಳ 27 ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು. ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪ್ರಥಮ, ಚಿತ್ರದುರ್ಗ ಸರಸ್ವತಿ ಕಾನೂನು ಕಾಲೇಜು ದ್ವಿತೀಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ತೃತೀಯ ಸ್ಥಾನ ಪಡೆಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ದೀಪಕ್ ಬೆಸ್ಟ್ ರೈಡರ್, ಚಿತ್ರದುರ್ಗ ಸರಸ್ವತಿ ಕಾನೂನು ಕಾಲೇಜಿನ ಭರತ್ ಬೆಸ್ಟ್ ಕ್ಯಾಚರ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶಶಿಕುಮಾರ್ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಪಡೆದುಕೊಂಡರು.
ವಿವೇಕಾನಂದ ಕಾನೂನು ಕಾಲೇಜು ವಿದ್ಯಾರ್ಥಿ ಸಂಘ ಅಧ್ಯಕ್ಷ ಸುರೇಶ್ ಸ್ವಾಗತಿಸಿ, ರಾಜೇಂದ್ರ ಪ್ರಸಾದ್ ವಂದಿಸಿದರು. ಕಾರ್ಯಕ್ರಮ ತಾಂತ್ರಿಕ ಅಧಿಕಾರಿ ರಾಮಚಂದ್ರ, ಪ್ರಸನ್ನಶ್ರೀ, ರಚನಾ ಕಾರ್ಯಕ್ರಮ ನಿರೂಪಿಸಿದರು.