ಸುಳ್ಯ: ಒಬ್ಬ ಅದ್ಭುತ ಕನಸುಗಾರರಾಗಿದ್ದ ಡಾ.ಕುರುಂಜಿ ವೆಂಕಟ್ರಮಣ ಗೌಡರು ತಾನು ಕಂಡ ಕನಸನ್ನು ನನಸು ಮಾಡಿದ ಧೀಮಂತ ಶಕ್ತಿ. ಅವರ ಆ ಶಕ್ತಿಯ ಪ್ರೇರಣೆಯಿಂದ ಇಲ್ಲೊಂದು ಉತ್ತಮ ಸಮಾಜ ರೂಪಿತವಾಗಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಕೆವಿಜಿ ವಿದ್ಯಾಸಂಸ್ಥೆಗಳ ಉದ್ಯೋಗಿಗಳು, ಮಾಜಿ ಉದ್ಯೋಗಿಗಳು, ಹಳೆ ವಿದ್ಯಾರ್ಥಿಗಳು ಸೇರಿ ಸುಳ್ಯದ ಕೆವಿಜಿ ಕ್ಯಾಂಪಸ್ನಲ್ಲಿ ನೂತನವಾಗಿ ನಿರ್ಮಿಸಿದ ಆಧುನಿಕ ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ವಿದ್ಯೆಯ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಡಾ.ಕುರುಂಜಿಯವರು ಹಲವು ವ್ಯಕ್ತಿಗಳ, ಇಡೀ ಸಮಾಜದ ಏಳಿಗೆಗೆ ಕಾರಣೀಭೂತರಾದವರು. ಡಾ.ಕುರುಂಜಿಯವರು ದೂರದೃಷ್ಠಿಯಿಂದ ಕಟ್ಟಿದ ವಿದ್ಯಾಸಂಸ್ಥೆಗಳು ಅನೇಕರಿಗೆ ವಿದ್ಯಾದಾನವನ್ನು ಮಾಡಿ ನಾಡಿಗೆ ಬೆಳಕನ್ನು ನೀಡಿದೆ. ಅವರ ಪುತ್ಥಳಿಯನ್ನು ಸ್ಥಾಪನೆ ಮಾಡುವುದರ ಮೂಲಕ ಈ ನಾಡಿಗೆ ಇನ್ನಷ್ಟು ಗೌರವ ಬಂದಂತಾಗಿದೆ ಎಂದು ಸದಾನಂದ ಗೌಡರು ಹೇಳಿದರು.
ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ನೆ, ಹರೂ ಸ್ಮಾರಕ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ.ಬಾಲಚಂದ್ರ ಗೌಡ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸಂಸದ ನಳಿನ್ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ, ಮಂಗಳೂರು ವಿವಿಯ ಉಪಕುಲಪತಿ ಡಾ.ಕೆ.ಬೈರಪ್ಪ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿಯ ಉಪ ಕುಲಪತಿ ಡಾ.ಸುಬ್ರಹ್ಮಣ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ತಾಲೂಕು ಪಂಚಯಿತಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಮುಖ್ಯ ಅತಿಥಿಗಳಾಗಿದ್ದರು. ಪ್ರತಿಮೆಯನ್ನು ನಿರ್ಮಿಸಿದ ಬೆಂಗಳೂರು ಬಿಡದಿಯ ಅಶೋಕ್ ಗುಡಿಗಾರ್ ಅವರನ್ನು ಸನ್ಮಾನಿಸಲಾಯಿತು.