ಬಂಟ್ವಾಳ: ರಾಜ್ಯದಲ್ಲಿ ಅಧಿಕಾರದಲ್ಲಿರುವ ನಿದ್ರಾವಸ್ಥೆಯ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ಜನ ಸಂಕಲ್ಪ ತೊಟ್ಟಿದ್ದು, ಶೀಘ್ರದಲ್ಲೇ ಬರಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಾರ್ಯಕರ್ತರ ಪಡೆ ಸನ್ನದ್ಧವಾಗಬೇಕಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿ.ಸಿ.ರೋಡ್ನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಕ್ರೀಯ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಭಿವೃದ್ಧಿ ಹೀನ ಸರ್ಕಾರ ಎಂಬುದು ಈಗಾಗಲೇ ಎಲ್ಲರ ಅರಿವಿಗೆ ಬಂದಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ದಿನನಿತ್ಯ ನಡೆಯುತ್ತಿರುವ ಅಪರಾಧ ಕೃತ್ಯಗಳೇ ಸಾಕ್ಷಿ ಎಂದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಯುವಜನತೆ ಹೆಚ್ಚು ಒಲವು ತೋರುತ್ತಿರುವುದು ಸಂತಸದ ವಿಚಾರ ಎಂದ ಅವರು, ಮೋದಿ ಪ್ರಧಾನಿಯಾದ ಬಳಿಕ ಭಾರತದ ಬಗ್ಗೆ ಜನತೆಗೆ ಇದ್ದ ನಿರಾಶಾವಾದ ದೂರವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಮಾತನಾಡಿ, ದ.ಕ.ಜಿಲ್ಲೆಯಾದ್ಯಂತ 4 ಲಕ್ಷ ಸದಸ್ಯರ ನೋದಾವಣಿಯ ಗುರಿ ಇರಿಸಲಾಗಿದ್ದು, ಕಾರ್ಯಕರ್ತರು ನಿಷ್ಠೆಯಿಂದ ಶ್ರಮಿಸಿದಲ್ಲಿ ಮಾತ್ರ ಇದು ಯಶಸ್ವಿಯಾಗುತ್ತದೆ ಎಂದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸಂಜೀವ ಮಠಂದೂರು, ಜಿ,ಪಂ,ಸದಸ್ಯ ಚೆನ್ನಪ್ಪ ಕೋಟ್ಯಾನ್ ಮಾತನಾಡಿ ಸದಸ್ಯತ್ವ ನೋಂದಣಿ ಕುರಿತಾಗಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.
ಕನ್ಯಾನ ಗ್ರಾ.ಪಂ. ಅಧ್ಯಕ್ಷ ರಘುರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಪ್ರಮುಖರಾದ ರಾಜೇಶ್ ನಾಯ್ಕ್, ದೇವದಾಸ್ ಶೆಟ್ಟಿ, ಕ್ಯಾ.ಬೃಜೇಶ್, ದಿನೇಶ್ ಅಮ್ಟೂರು ಮೊದಲಾದವರು ವೇದಿಕೆಯಲ್ಲಿದ್ದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಸ್ವಾಗತಿಸಿದರು. ಉಪಾಧ್ಯಕ್ಷ ತನಿಯಪ್ಪ ಗೌಡ ವಂದಿಸಿದರು. ತಾ.ಪಂ.ಸದಸ್ಯ ಆನಂದ ಶಂಭೂರು ಕಾರ್ಯಕ್ರಮ ನಿರ್ವಹಿಸಿದರು.