ಮಂಗಳೂರಿನಿಂದ ಹೊರಟು ಎತ್ತಿನಹೊಳೆ ತಲುಪುವ ಮುನ್ನವೇ ಬಂಧನಕ್ಕೊಳಗಾದಿರಿ?
– ನನ್ನನ್ನು ಬಂಧಿಸುವ ಮೂಲಕ ಸರಕಾರ ಹೋರಾಟಕ್ಕೆ ಹೆದರಿದೆ ಎಂದು ಘೋಷಿಸಿಕೊಂಡಂತಾಯಿತು. ಸಿದ್ದರಾಮಯ್ಯಗೆ ಭಯವಾದ ಕಾರಣ ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಮಾಡಿದರು. ನಮ್ಮನ್ನು ಬಂಧಿಸುವ ಮೂಲಕ ಸರಕಾರಕ್ಕೆ ನಮ್ಮ ಹೋರಾಟವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದು ನಮಗೆ ಖಾತ್ರಿಯಾಗಿದೆ. ಪಾದಯಾತ್ರೆಗೆ ಅನುಮತಿ ಇದ್ದರೂ ಬಂಧಿಸಲು ಸರಕಾರ ಸೂಚಿಸಿದೆ ಎಂದಾದರೆ ಹೋರಾಟದ ಭಯವಲ್ಲದೇ ಇನ್ನೇನು?
ಮುಂಬರುವ ಜಿ.ಪಂ., ತಾ. ಪಂ. ಚುನಾವಣೆಗೆ ತಾಲೀಮು ಮಾಡಿದಿರಂತೆ?
– ಹಾಗಂತ ಆರೋಪ ಮಾಡುವವರು ತಾವೂ ಎತ್ತಿನಹೊಳೆ ವಿರುದ್ಧ ಹೋರಾಟ ಮಾಡಲಿ. ನಮ್ಮ ಪಕ್ಷಕ್ಕೆ ಲಾಭವಾಗುವುದಾದರೆ ಅವರೂ ಪಡೆದುಕೊಳ್ಳಲಿ. ನಮ್ಮದು ವಿಷಯಾಧಾರಿತ ಹೋರಾಟ. ಎತ್ತಿನಹೊಳೆ ವಿರುದ್ಧ ಯಾರು ಪ್ರತಿಭಟಿಸಿದರೂ ನಮ್ಮ ಬೆಂಬಲ ಇದೆ. ಇಷ್ಟಕ್ಕೂ ನಮ್ಮ ಪಾದಯಾತ್ರೆ ಸಂದರ್ಭದಲ್ಲಿ ಸ್ಪಷ್ಟಪಡಿಸಿದಂತೆ ಈಗಾಗಲೇ ಸಂಪುಟ ಸಭೆಯಲ್ಲಿ ದ.ಕ. ಪರವಾಗಿ ಧ್ವನಿ ಎತ್ತಿದ ಸಚಿವರ ಧ್ವನಿಗೆ ಬೆಂಬಲವಾಗಿಯೇ ಈ ಹೋರಾಟ ನಡೆದಿದೆ.
ನಿಮ್ಮದೇ ಪಕ್ಷದವರು ಮಾಡಿದ ಪಾಪದ ಕೂಸಲ್ಲವೇ ಇದು?
– ಒಬ್ಬ ಮುಖ್ಯಮಂತ್ರಿಯಾದವನಿಗೆ ಇಡೀ ರಾಜ್ಯದ ಹಿತ, ಸಾಮಾಜಿಕ ನ್ಯಾಯ ಮುಖ್ಯವಾಗುತ್ತದೆ. ಹಾಗಂತ ಡಿ.ವಿ ಅವರು ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜನರಿಗೆ ಸಮಗ್ರ ಕುಡಿಯುವ ನೀರು ಒದಗಿಸಲು ಸರ್ವೆ ನಡೆಸಲು ಮಾತ್ರ ಸೂಚಿಸಿದ್ದು. ನೀರಿನ ಸಮಸ್ಯೆ ನಿವಾರಣೆಗಾಗಿ ಸರ್ವೆ ಕಾರ್ಯಗಳಿಗೆ ಅಂಕಿತ ಹಾಕಬಾರದು ಎಂದೇನಿಲ್ಲ. ಹತ್ತಾರು ಯೋಜನೆಗಳ ಸಮೀಕ್ಷೆಯಂತೆ ಇದರ ಸಮೀಕ್ಷೆಗೂ ಮುದ್ರೆಯೊತ್ತಿದ್ದಾರೆ.
ಆದರೆ ಈಗಿನ ಸರಕಾರ 1,300 ಕೋ.ರೂ. ಮೀಸಲಿಟ್ಟಿತು. ಚುನಾವಣೆ ವೇಳೆ ತರಾತುರಿಯಲ್ಲಿ ಶಂಕುಸ್ಥಾಪನೆ ಮಾಡಿತು. ಎರಡು ಜಿಲ್ಲೆಗೆ ಸಂಬಂಧಿಸಿದ ಹೋರಾಟಗಾರರನ್ನು ಕತ್ತಲಲ್ಲಿಟ್ಟು ತಜ್ಞರ ಅಭಿಮತವನ್ನು ಜನತೆಯ ಜತೆ ಮುಕ್ತವಾಗಿ ಹಂಚಿಕೊಳ್ಳದೆ ಕಾಮಗಾರಿ ಮಾಡುತ್ತಿರುವುದು ಏಕೆ? ಜಾಗತಿಕ ಟೆಂಡರ್ ನಡೆಸಿಲ್ಲ ಏಕೆ? ಜಿಲ್ಲೆಯ ಜನತೆಗೆ ಯಾವುದೇ ಮಾಹಿತಿ ನೀಡಿಲ್ಲ ಏಕೆ?
ಹಾಗಾದರೆ ಎತ್ತಿನಹೊಳೆ ಸಿದ್ದರಾಮಯ್ಯನವರ ಕೂಸು?
– ಖಂಡಿತ. ಯೋಜನೆಗೆ ಬೇಕಾಗುವ ಮಿಕ್ಕುಳಿದ 11 ಸಾವಿರ ಕೋ.ರೂ. ಎಲ್ಲಿಂದ ತರುತ್ತಾರೆ? ಡಿ.ವಿ, ಯಡಿಯೂರಪ್ಪ ಕಾಲದ ಅನೇಕ ಯೋಜನೆಗಳನ್ನು ರದ್ದು ಮಾಡಿಲ್ಲವೇನು? ಗೋ ಸೇವಾ ಆಯೋಗ, ಪೂರ್ತಿ ಸಾಲಮನ್ನಾ ಯೋಜನೆ, ಭಾಗ್ಯಲಕ್ಷ್ಮೀಯಂತಹ ಯೋಜನೆಗಳಿಗೆ ಅಂಕುಶ ಹಾಕಿಲ್ಲವೇ? ಈ ಯೋಜನೆ ಡಿ.ವಿ.ಯವರ ಕೂಸಾದರೆ ಈಗಿನ ಸರಕಾರ ಮುಂದಡಿಯಿಟ್ಟದ್ದೇಕೆ?
ಸರಿ. ಕೇಂದ್ರಕ್ಕೆ ಹೇಳಿ ನಿಲ್ಲಿಸಬಹುದಲ್ಲವೇ?
– ಈಗ ಚೆಂಡು ರಾಜ್ಯದ ಅಂಗಳದಲ್ಲಿದೆ. ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಇಲ್ಲಿಂದ ನಿರಾಕ್ಷೇಪಣೆ ಬಯಸಿ ಅರ್ಜಿ ಬಂದಾಗ ಕೇಂದ್ರದಲ್ಲಿ ನಾವು ನೋಡಿಕೊಳ್ಳುತ್ತೇವೆ. ಅದಕ್ಕೂ ಮುನ್ನ ಕೇಂದ್ರ ಅರಣ್ಯ, ಪರಿಸರ ಸಚಿವ ಪ್ರಕಾಶ ಜಾವಡೇಕರ್ ಹಾಗೂ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರ ಬಳಿ ಇಲ್ಲಿನ ಹೋರಾಟಗಾರರ, ಪಕ್ಷದವರ ನಿಯೋಗ ಒಯ್ಯುತ್ತೇನೆ.
ಮೋದಿ ಹತ್ರ ಹೋಗ್ತೀರಾ?
– ಸಿದ್ದರಾಮಯ್ಯ ನನ್ನ ಕೈಲಾಗದು ಎಂದು ಹೇಳಿದ ಮರುದಿನ ನಾವು ಪ್ರಧಾನಿ ಸಚಿವಾಲಯದಲ್ಲಿರುತ್ತೇವೆ.
ನಿಮ್ಮ ಹೋರಾಟಕ್ಕೆ ರಾಜ್ಯ ಸರಕಾರ ಸ್ಪಂದಿಸುವ ಭರವಸೆ ಇದೆಯೇ?
– ಅಂತರ್ಜಿಲ್ಲೆಗಳ ನಡುವೆ ಕಲಹ ತಂದಿಕ್ಕುತ್ತಾ ಆಡಳಿತ ನಡೆಸುವುದು ಶೋಭೆ ಅಲ್ಲ. ಐಐಟಿ, ಕಳಸಾ ಬಂಡೂರಿ, ಎತ್ತಿನಹೊಳೆ ಎಂದು ಒಂದೇ ರಾಜ್ಯದ ಪ್ರತ್ಯೇಕ ಜಿಲ್ಲೆಗಳ ಜನ ಹೊಡೆದಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ರಾಜ್ಯ ಸರಕಾರ ತಂದಿಟ್ಟಿದೆ. ರಾಜ್ಯದಿಂದ ಕೇಂದ್ರಕ್ಕೆ ಎತ್ತಿನಹೊಳೆ ಸಂಬಂಧದ ಅರ್ಜಿ ಬರಲಿ. ಇವರು ನಾಲಾಯಕ್ ಅಂತ ನಿರೂಪಿಸುತ್ತೇನೆ.
ಅನುಮತಿ ತಡೆ ಹಿಡಿಯುತ್ತೀರಾ?
– ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ.
ಆದರೆ ವಾಜಪೇಯಿ ಹಾಗೂ ಮೋದಿ ನದಿ ಜೋಡಣೆಯಲ್ಲಿ ಆಸಕ್ತರಲ್ಲವೇ?
– ನದಿ ಜೋಡಣೆ ಬೇರೆ, ತಿರುವು ಬೇರೆ. ನದಿ ಜೋಡಣೆಗೆ ನನ್ನದೂ ಬೆಂಬಲ ಇದೆ.
ನೇತ್ರಾವತಿ -ಹೇಮಾವತಿ ಜೋಡಿಸುವ ಪ್ರಸ್ತಾಪ ಕೇಂದ್ರದಲ್ಲಿದೆಯಂತೆ?
– ದ.ಕ. ಜನತೆಗೆ ನೀರು ಕೊಡಲು ಯಾವುದೇ ಯೋಜನೆ ಮಾಡಲಿ. ಇಲ್ಲಿಂದ ನೀರು ಕೊಂಡೊಯ್ಯಲು ಬಿಡುವ ಪ್ರಶ್ನೆಯೇ ಇಲ್ಲ.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದು ನೀರು ಕೊಡೆವು ಅಂದರೆ ಹೇಗೆ?
– ಕೋಲಾರಕ್ಕೆ ನೀರು ಕೊಡಬೇಡಿ ಎಂದಿಲ್ಲ. ನಮ್ಮ ಹೋರಾಟ ಕೋಲಾರದ ಜನತೆಯ ವಿರುದ್ಧ ಅಲ್ಲ. ಬಯಲು ಸೀಮೆಗೆ ನೀರು ಕೊಡಿ. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡುತ್ತೇವೆ. ಎತ್ತಿನಹೊಳೆ ಯೋಜನೆ ಮಾಡಿದರೆ ಎರಡೂ ಜಿಲ್ಲೆಗಳಿಗೆ ನೀರಿಲ್ಲದಂತಾಗುತ್ತದೆ. ಜನರ ತೆರಿಗೆ ಹಣ ಪೋಲಾಗುತ್ತದೆ.
ನಮ್ಮ ರಾಜ್ಯದಷ್ಟೂ ವಿಸ್ತಾರವಿಲ್ಲದ ಅರಬ್ ರಾಷ್ಟ್ರಗಳಲ್ಲಿ ಸಮುದ್ರದ ನೀರನ್ನು ನಿರ್ಲವಣ ಮಾಡಿ ಹಂಚಲಾಗುತ್ತದೆ. ಹಾಗೊಂದು ವೇಳೆ ರಾಜ್ಯ ಸರಕಾರ ಸಮುದ್ರದ ನೀರು ಶುದ್ಧ ಮಾಡಿ ಕೊಡುವುದಾದರೆ ಪೈಪ್‌ಲೈನ್‌ಗೆ ಜಾಗ ನಾನು ಕೊಡಿಸುತ್ತೇನೆ. ಇಡೀ ರಾಜ್ಯಕ್ಕೆ ಇದೇ ಆಜೂಬಾಜಿನ ವೆಚ್ಚದಲ್ಲಿ ನೀರು ಹಂಚುವ ಯೋಜನೆ ಮಾಡಬಹುದು.
ಪಾದಯಾತ್ರೆ ನಾಟಕವಾ?
– ನಾನೊಬ್ಬ ಜನಪ್ರತಿನಿಧಿ. ನನಗೆ ಜನರ ಆಶೀರ್ವಾದ ಇದೆ. ಅವರ ಒಳಿತಿಗಾಗಿ ಯಾವುದೇ ಕೆಲಸ ಮಾಡುತ್ತೇನೆ. ಟೀಕಿಸುವವರಿಗೆ ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲ ಹಕ್ಕುಗಳೂ ಇವೆ. ಹೊಗಳಿಕೆ -ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆ.
ಹೋರಾಟ ದ.ಕ. ಜಿಲ್ಲೆಗೆ ಸೀಮಿತವಾ?
– ಸರಕಾರ ಕಡೆಗಣಿಸಿದರೆ ಇದು ರಾಜ್ಯ ಮಟ್ಟಕ್ಕೆ ಪರಿವರ್ತನೆಯಾದೀತು. ಅನಿವಾರ್ಯವಾದರೆ ಅಯೋಧ್ಯೆಯ ಕರಸೇವೆಯ ಸಂದರ್ಭ ಗುಮ್ಮಟ ಒಡೆಯುವಲ್ಲಿ ದ.ಕ. ಜನತೆ ಮುಂದಿದ್ದರು ಎನ್ನುವುದನ್ನು ನೆನಪಿಸುತ್ತಾ ಎತ್ತಿನಹೊಳೆಗೂ ಅಯೋಧ್ಯೆ ಮಾದರಿಯ ಕರಸೇವೆ ಅನಿವಾರ್ಯವಾದೀತು. ಅಂತಹ ಹೋರಾಟ ಮೂಲಕ ಎತ್ತಿನಹೊಳೆ ಯೋಜನೆಗೆ ತಿಲಾಂಜಲಿ ಇಡುತ್ತೇವೆ.
ಸರಕಾರ ದ.ಕ.ಕ್ಕೆ 700 ಕೋ.ರೂ.ಗಳ ಪಶ್ಚಿಮವಾಹಿನಿ ನೀಡುತ್ತದಂತಲ್ಲಾ?
– ಇವರಿಗೆ ಕೇಂದ್ರ ಸರಕಾರಿ ಅನುದಾನದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲೇ ಸಾಧ್ಯವಾಗಿಲ್ಲ. ಇನ್ನು ಪಶ್ಚಿಮವಾಹಿನಿಗೆ ರಾಜ್ಯ ಸರಕಾರದ ಬಳಿ ದುಡ್ಡೆಲ್ಲಿದೆ? ಇದು ಸುಮ್ಮನೆ ಆಮಿಷಗಳನ್ನು ಹುಟ್ಟಿಸಿ ಹೋರಾಟದ ಹಾದಿ ತಪ್ಪಿಸುವ ಯತ್ನ.
ಚುನಾವಣೆಯಲ್ಲಿ ಎದುರಾಳಿಗಳಾದ ಜನಾರ್ದನ ಪೂಜಾರಿ -ನಳಿನ್ ಎತ್ತಿನಹೊಳೆ ವಿಚಾರದಲ್ಲಿ ಸಮಾನ ಮನಸ್ಕರಾಗಿದ್ದೀರಿ?
– ಪೂಜಾರಿ ನನ್ನ ವೈರಿ ಅಲ್ಲ. ಎದುರಾಳಿಯೂ ಅಲ್ಲ. ನನ್ನ ಅವರ ಮಧ್ಯೆ ಪಕ್ಷದ ವೈಚಾರಿಕ ಭಿನ್ನಾಭಿಪ್ರಾಯ ಮಾತ್ರ ಇರುವುದು. ನಾನು ಅತಿ ಹೆಚ್ಚು ಗೌರವಿಸುವ ರಾಜಕಾರಣಿ ಅವರು. ಅವರ ಶಬ್ದಕ್ಕೆ ನನ್ನ ಪ್ರತಿಕ್ರಿಯೆಗಳೇ ಇಲ್ಲ. ಅವರಂತೆ ಎಲ್ಲ ರಾಜಕಾರಣಿಗಳೂ ವೈಚಾರಿಕ ಭಿನ್ನಮತ ಮರೆತು ಎತ್ತಿನಹೊಳೆ ವಿಚಾರದಲ್ಲಿ ಒಂದಾಗಬೇಕು. ಎಲ್ಲ ಪಕ್ಷಗಳ ಮುಖಂಡರ ಮನಸ್ಸು ನೇತ್ರಾವತಿ ಕಡೆಗೆ ತಿರುಗಬೇಕು.
ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಏನು ಮಾಡಲಿದೆ?
– ಸಚಿವರು ಈ ವಿಚಾರ ಎತ್ತಿದರೆ ನಮ್ಮ ಪೂರ್ಣ ಬೆಂಬಲ ಇದೆ. ಇಲ್ಲದಿದ್ದರೆ ನಮ್ಮ ಪಕ್ಷದ ಶಾಸಕರೇ ಧ್ವನಿಯೆತ್ತುತ್ತಾರೆ.
ದ.ಕ.ದ ಧ್ವನಿ ಕ್ಷೀಣವಾಯಿತೇ?
– ಸರಕಾರ ಮನಸ್ಸು ಮಾಡಿದರೆ ಅಂತಹ ಜಾಣತನ ಬೇಕಾಗುವುದಿಲ್ಲ. ವಿಶೇಷ ಆರ್ಥಿಕ ವಲಯ ಸಂದರ್ಭ ಕುಡುಬಿ ಜನಾಂಗದವರಿಗೆ ತೊಂದರೆಯಾಗುತ್ತದೆ ಎಂದು ನಾನು ಎಲ್ಲ ಪಕ್ಷದ ಶಾಸಕರ ಜತೆ ಯಡಿಯೂರಪ್ಪ ಬಳಿ ಹೋದಾಗ ಯೋಜನೆಗೆ ತಡೆ ನೀಡಿದ್ದಾರೆ. ಸರಕಾರಕ್ಕೆ ಇಚ್ಛಾಶಕ್ತಿ ಬೇಕು.