ಪುತ್ತೂರು : ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಗೆಲುವು ಖಚಿತ. ಹಾಗೆಂದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚು ಮತ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಇಂದಿಗೂ ಖಚಿತವಾಗಿಲ್ಲ, ಗೊಂದಲಗಳು ಇವೆ. ಪ್ರತಾಪ್ಚಂದ್ರ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿ. ಜಯಪ್ರಕಾಶ್ ಹೆಗ್ಡೆಯೂ ಕಣದಲ್ಲಿ ಇರುವುದರಿಂದ ಕಾಂಗ್ರೆಸ್ ಒಡೆದ ಮನೆ ಎನ್ನುವುದು ಸ್ಪಷ್ಟ. ಅಧಿಕೃತ ಅಭ್ಯರ್ಥಿ ಪರ ಇರುವುದಾದರೆ ಜಯಪ್ರಕಾಶ್ ಹೆಗ್ಡೆ ಅವರನ್ನು ಹೊರಗಿಟ್ಟಿದ್ದೇವೆ ಎಂದು ಘೋಷಿಸಬೇಕು. ಇದನ್ನು ಮಾಡಿದ್ದೇ ಆದಲ್ಲಿ ಸ್ಪಷ್ಟವಾಗುತ್ತದೆ, ಇಲ್ಲದೇ ಇದ್ದಲ್ಲಿ ಗೊಂದಲ ಇರುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ರಾಜಕೀಯ ಡೊಂಬರಾಟ ನಡೆಯುವುದು ಎಂಬ ಭಯ ಇದೆ. ಇದರ ಜೊತೆ ಹಣ ಪೋಲೂ ಆಗುತ್ತದೆ ಇದಕ್ಕೆ ಕಾಂಗ್ರೆಸ್ ಕಾರಣವಾಗುತ್ತದೆ ಎಂದ ಅವರು ಜಿಲ್ಲೆಯಲ್ಲಿ ಒಟ್ಟು 3466 ಪಂಚಾಯತ್ ಸದಸ್ಯರಿದ್ದಾರೆ. ಅದರಲ್ಲಿ 1900 ಬಿಜೆಪಿ, 1454 ಕಾಂಗ್ರೆಸ್, 19 ಜೆಡಿಎಸ್, 39 ಎಸ್ಡಿಪಿಐ, 11 ಸಿಪಿಐಎಂ, 36 ಇತರರು. ತಾಪಂ, ಜಿಪಂನ 381 ಸದಸ್ಯರಲ್ಲಿ 183 ಬಿಜೆಪಿ, 173 ಕಾಂಗ್ರೆಸ್, 10 ಜೆಡಿಎಸ್, 2 ಸಿಪಿಐ ಹಾಗೂ 3 ಇತರರಿದ್ದಾರೆ. ಆದ್ದರಿಂದ ಗೆಲುವು ಸುಲಭವಿದೆ. ವ್ಹಾಟ್ಸ್ಆಪ್ ಮೂಲಕ ಸುಳ್ಳು ಮಾಹಿತಿ ಹರಿಸುತ್ತಿರುವ ಕಾಂಗ್ರೆಸ್ನ ತಂತ್ರವನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದರು. ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದಾಗ ದೇವಸ್ಥಾನ, ದೈವಸ್ಥಾನಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅತ್ಯಂತ ಬಡವರಿಗೂ ಸಹಾಯ ಮಾಡಿದ್ದಾರೆ, ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ. ಬಹುಗ್ರಾಮ ಕುಡಿಯುವ ನೀರು, ಸ್ವರ್ಣ ಗ್ರಾಮದ ಯೋಜನೆ ತಂದಿದ್ದಾರೆ. ಆದ್ದರಿಂದ ಬಿಜೆಪಿಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮದೇ ಕ್ಷೇತ್ರಕ್ಕೆ ಮಾತ್ರವೇ ಯೋಜನೆಗಳನ್ನು ತರುತ್ತಿದ್ದಾರೆ ಹೊರತು ಇತರ ತಾಲೂಕುಗಳ ಕಡೆಗೆ ಗಮನಹರಿಸಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಉಪಸ್ಥಿತರಿದ್ದರು.
ಎತ್ತಿನಹೊಳೆ ವಿರೋಧಿಸಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ
ಎತ್ತಿನಹೊಳೆ ಯೋಜನೆಗೆ ಗ್ರೀನ್ ಬೆಂಚ್ ತಡೆಯಾಜ್ಞೆ ನೀಡಿದೆ. ಎತ್ತಿನಹೊಳೆ ಯೋಜನೆ ವಿರುದ್ದ ಈಗಾಗಲೇ ವಿವಿಧ ಹೋರಾಟ ಮಾಡಲಾಗಿದೆ , ಮುಂದೆಯೂ ಮಾಡಲಾಗುತ್ತದೆ. ಯೋಜನೆ ವಿರುದ್ಧ ಸಾಂವಿಧಾನಿಕ, ಕಾನೂನು, ಸಾಮೂಹಿಕ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿದ್ದೇನೆ.
ಸುಪ್ರೀಂ ಕೋರ್ಟ್ನ ಹಸಿರು ಪೀಠ ತಡೆಯಾಜ್ಞೆ ನೀಡಿದ ನಡುವೆಯೂ ಕಾಮಗಾರಿ ನಡೆಯುತ್ತಿದೆ. ಇದರ ಬಗ್ಗೆ ಸದನದ ಶೂನ್ಯ ವೇಳೆಯಲ್ಲಿ ಮಾತನಾಡುವೆ. ಡಿ.16, 17ರಂದು ಸರ್ವಪಕ್ಷ ಹಾಗೂ ಹೋರಾಟಗಾರರ ನಿಯೋಗ ಕೊಂಡೊಯ್ದು ಕೇಂದ್ರ ಸಚಿವರಾದ ಉಮಾಭಾರತಿ, ಪ್ರಕಾಶ್ ಜಾವಡೇಕರ್ ಜೊತೆ ಮಾತುಕತೆ ನಡೆಸಲಾಗುವುದು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಒತ್ತಾಯಿಸಲಾಗುವುದು. ಸರ್ವಪಕ್ಷ ನಿಯೋಗ ಹೋರಾಟಗಾರ ಮುಂದಾಳತ್ವದಲ್ಲೇ ರಚನೆಯಾಗಲಿದ್ದು, ಕೊನೆವರೆಗೂ ಹೋರಾಟದ ಜೊತೆಗೆ ನಿಲ್ಲುತ್ತೇನೆ. ನಾನು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವನು. ಆದ್ದರಿಂದ ಕಾರ್ಯಕರ್ತನೇ ಹೊರತು, ನಾಯಕನಾಗಲು ಇಷ್ಟಪಡುವುದಿಲ್ಲ. ಹಾಗಾಗಿ ಇಂದು ನಂಬರ್1 ಸ್ಥಾನಕ್ಕೆ ಬರಲು ಸಾಧ್ಯವಾಯಿತು.
ಆದರೆ ಕೆಲವರು ಟೀಕಿಸುತ್ತಾರೆ, ಇದಕ್ಕೆ ಉತ್ತರವಿಲ್ಲ, ನನಗೆ ಯಾರದ್ದೇ ಸರ್ಟಿಫಿಕೇಟ್ ಬೇಕಾಗಿಲ್ಲ, ಜನರೇ ಸರ್ಟಿಫಿಕೇಟ್ ನೀಡಿದ್ದಾರೆ, ಅದು ಸಾಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.