ದಕ್ಷಿಣ ಕನ್ನಡದ ಪ್ರಭಾವಿ ಸಮುದಾಯಗಳಲ್ಲೊಂದು ಬಂಟ್ಸ್ ಸಮುದಾಯ. ಈ ಪ್ರಭಾವಿ ಸಮುದಾಯದ ಪ್ರಭಾವಿ ಮುಖಂಡ ಹಾಲಿ ಬಿಜೆಪಿ ಸಂಸದ ಮತ್ತು ಮತ್ತೆ ಆಯ್ಕೆ ಬಯಸಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ನಳಿನ್ ಕುಮಾರ್ ಕಟೀಲ್. ಸರಳ ವ್ಯಕ್ತಿತ್ವದ ನಳಿನ್ ಕಾರ್ಯಕರ್ತರ ಜೊತೆ ಮತ್ತು ಸ್ಥಳೀಯ ಮುಖಂಡರ ಜೊತೆ ಚೆನ್ನಾಗಿ ಬೆರೆತು ಚುನಾವಣಾ ಪ್ರಚಾರವನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಶುದ್ದ ಸಸ್ಯಾಹಾರಿಯಾಗಿರುವ ನಳಿನ್ ದೈನಂದಿನ ಊಟದ ಶೈಲಿ ಹೇಗೆಂದರೆ ಕುಚುಗಲ್ ಅಕ್ಕಿ ಗಂಜಿ, ಅದಕ್ಕೆ ಒಂದಿಷ್ಟು ಉಪ್ಪು ಮತ್ತು ತುಪ್ಪ ಜೊತೆಗೆ ಮಾವಿನ ಮಿಡಿಯ ಉಪ್ಪಿನ ಕಾಯಿ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದ್ದರೂ, ವಿಧಾನಸಭಾ ಚುನಾವಣೆಯೇ ಬೇರೆ ಲೋಕಸಭಾ ಚುನಾವಣೆಯೇ ಬೇರೆ ಎನ್ನುವ ನಳಿನ್ ಮತ್ತೆ ಚುನಾವಣೆ ಗೆಲ್ಲುವ ಅದಮ್ಯ ವಿಶ್ವಾಸದಲ್ಲಿದ್ದಾರೆ. ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಜನಾರ್ಧನ ಪೂಜಾರಿ, ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ ನಡುವೆ ನೇರ ಪೈಪೋಟಿಯಿದೆ. ಅವರಿಗೊಂದು ಆಲ್ ದಿ ಬೆಸ್ಟ್ ಹೇಳುತ್ತಾ, ‘ಒನ್ ಇಂಡಿಯಾ’ ಜೊತೆ ನಳಿನ್ ಕುಮಾರ್ ಕಟೀಲ್ ನಡೆಸಿದ ಸಂದರ್ಶನದ ಆಯ್ದ ಭಾಗ ಇಂತಿದೆ.
ಪ್ರ: ಹೋದ ಅಸೆಂಬ್ಲಿ ಚುನಾವಣೆಯಲ್ಲಿ ಸುಳ್ಯ ಹೊರತು ಪಡೆಸಿ ಮಿಕ್ಕೆಲ್ಲಾ ಕಡೆ ಬಿಜೆಪಿ ಮುಗ್ಗರಿಸಿದೆ. ಚೇತರಿಕೆ ಹೇಗೆ?
ನಳಿನ್: ಕಳೆದ ಬಾರಿ ಆಡಳಿತ ವಿರೋಧಿ ಅಲೆ ಇತ್ತು. ಯಡಿಯೂರಪ್ಪ ಪಕ್ಷ ತೊರೆದಿದ್ದರಿಂದ ನಮಗೆ ಹಿನ್ನಡೆಯಾಯಿತು ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಆದರೆ ಲೋಕಸಭಾ ಚುನಾವಣೆಯ ಲೆಕ್ಕಾಚಾರವೇ ಬೇರೆ. ಇಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಎಲ್ಲರೂ ಏಕ ಮನಸ್ಸಿನಿಂದ ಕೆಲಸ ಮಾಡುತ್ತಿದ್ದೇವೆ. ಹೊಸ ತಲೆಮಾರು ಮೋದಿ ಅವರನ್ನು ಪ್ರಧಾನಿಯಾಗಿ ನೋಡಲು ಆಸೆ ಪಡುತ್ತಿದ್ದಾರೆ. ನಮ್ಮದು ಅಭಿವೃದ್ದಿ ಮಂತ್ರ, ಇದಕ್ಕೆ ಮೋದಿಯೇ ಮಾದರಿ.
ಪ್ರ: ಚುನಾವಣಾ ಬಲ ನಿಮ್ಮದೋ ಅಥವಾ ಮೋದಿಯವರದ್ದೋ?
ನಳಿನ್ : (ನಗುತ್ತಾ) ಇಬ್ಬರದ್ದು. ಮೋದಿ ಬಲದ ಜೊತೆಗೆ ಬಹೆಗರಿಯ ಬೇಕಾದ ಇಲ್ಲಿನ ಸಮಸ್ಯೆಗಳೂ ಸಾಕಷ್ಟಿವೆ. ಸಿದ್ದರಾಮಯ್ಯ ಸರಕಾರದ ಮೇಲೆ ಜನ ಸಾಕಷ್ಟು ನಂಬಿಕೆ ಇಟ್ಟು ಕೊಂಡಿದ್ದರು. ಆದರೆ, ಅವರ ಆದ್ಯತೆ ಅಹಿಂದಾ ಮಾತ್ರ ಎನ್ನುವುದು ಜನತೆಗೆ ಮನದಟ್ಟಾಗಿದೆ. ಕಾರ್ಡುದಾರರಿಗೆ ಅಕ್ಕಿ ಸಿಗುತ್ತಿಲ್ಲ. ಜೊತೆಗೆ, ನಮ್ಮ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ತೆರಳಿ ಯುಪಿಎ ಸರಕಾರದ ದುರಾಡಳಿತವನ್ನು ಜನತೆಗೆ ಮನವರಿಕೆ ಮಾಡುತ್ತಿದ್ದಾರೆ. ಪಾಕಿಸ್ಥಾನ ಮತ್ತು ಚೀನಾ ದೇಶದ ತಂಟೆ ತಕರಾರಿಗೆ ಪ್ರಧಾನಿ ಮೌನ ತಾಳಿರುವ ವಿಚಾರವನ್ನೂ ಜನರಿಗೆ ನಮ್ಮ ಕಾರ್ಯಕರ್ತರು ವಿವರಿಸುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಎಂದರೆ ‘ಅಬ್ ಕ ಸರ್ಕಾರ್ ಮೋದಿ ಸರ್ಕಾರ್’. ಹಾಗಾಗಿ ಮೋದಿ ಹೆಸರು ಜೊತೆಗೆ ನಮ್ಮ ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತೇವೆ.
ಪ್ರ: ನೇತ್ರಾವತಿ ತಿರುವು ಯೋಜನೆ ಜಾರಿಯಾದರೆ ದಕ್ಷಿಣಕನ್ನಡ ಜಿಲ್ಲೆಗೆ ಆಗುವ ನಷ್ಟ ಏನು?
ನಳಿನ್ : ನೋಡಿ, ಈ ಯೋಜನೆಗೆ ಆಸ್ತಿಭಾರ ಹಾಕಿದ್ದು ಕಾಂಗ್ರೆಸ್ ಸರಕಾರ. ಎಸ್ ಎಂ ಕೃಷ್ಣ ಸರಕಾರದ ಕಾಲದಲ್ಲೇ ಇದರ ಚರ್ಚೆಯಾಗಿತ್ತು. ಕೋಲಾರದಂತಹ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಪರಮಶಿವಯ್ಯ ಅವರದ್ದು. ಸದಾನಂದ ಗೌಡರ ಕಾಲದಲ್ಲಿ ಅದಕ್ಕೆ ಹಣ ಇಟ್ಟರೆಂಬುದು ನಿಜ. ಆದರೆ ಕಾಂಗ್ರೆಸ್ ಸರಕಾರ ಕೇವಲ ಓಟ್ ಬ್ಯಾಂಕಿಗಾಗಿ, ಕರಾವಳಿಗರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಕೈಗೊಂಡಿತ್ತು. ಬಿಜೆಪಿ ಸರಕಾರ ಜಾರಿಗೊಳಿಸಿದ್ದ ಗೋಹತ್ಯಾ ನಿಷೇಧ ಕಾಯ್ದೆಯನ್ನು ಏಕಾಏಕಿ ತಡೆಹಿಡಿದ ಕಾಂಗ್ರೆಸ್ ಸರಕಾರ ಈ ಯೋಜನೆಯನ್ನು ಕೈಬಿಡಬಹುದಿತ್ತಲ್ಲ. ಮೊಯ್ಲಿಯವರು ಐದು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರಿಗೆ ಶಾಸ್ವತ ಪರಿಹಾರ ಯೋಜನೆ ರೂಪಿಸುವುದಾಗಿ ವಾಗ್ದಾನ ಮಾಡಿದ್ದರು. ಈಗ ಚುನಾವಣೆಯ ಸಮಯದಲ್ಲಿ ಅವಸರ ಅವಸರವಾಗಿ ಶಂಕುಸ್ಥಾಪನೆ ಮಾಡಿದ್ದಾರೆ. ಈ ಭಾಗದ ಸಂಸದನಾಗಿ ಎತ್ತಿನಹೊಳೆ, ನೇತ್ರಾವತಿ ಯೋಜನೆಗೆ ನನ್ನ ವಿರೋಧವಿದೆ. ಈ ಭಾಗದಲ್ಲಿ ಹರಿಯುತ್ತಿರುವುದು ಒಂದು ನದಿ ಸ್ವಾಮಿ, ಅದು ನೇತ್ರಾವತಿ. ಬೇರೆಯವರಿಗೆ ನೀರು ಕೊಡಬಾರದೆನ್ನುವಷ್ಟು ಕಠೋರಿಗಳು ನಾವಲ್ಲ. ನಮಗೇ ಇಲ್ಲಿ ಕುಡಿಯಲು ನೀರಿಲ್ಲ. ಮಾರ್ಚ್ ಅಂತ್ಯದಲ್ಲೇ ಎರಡು ದಿನಕ್ಕೊಮ್ಮೆ ಒಂದೊಂದು ಗಂಟೆ ನೀರುಬರುತ್ತಿದೆ. ಇನ್ನು ಬಿರು ಬೇಸಿಗೆಯಲ್ಲಿ?
ಪ್ರ: ಹಳೇ ಹುಲಿ ಪೂಜಾರಿಯವರನ್ನು ಈ ಬಾರಿಯೂ ಬೋನಿಗೆ ಕೆಡುವಲು ಏನು ಪ್ಲಾನ್?
ನಳಿನ್: ಪೂಜರಿಯವರು ಹಿರಿಯರು, ರಾಜಕೀಯವನ್ನು ಗಾಢವಾಗಿ ಅರಿತು ಕೊಂಡವರು. ಅವರ ಮೇಲೆ ನನಗೆ ಗೌರವವಿದೆ. ಅತ್ಯಂತ ಹಳೆಯ ಪಕ್ಷವನ್ನು ಪ್ರತಿನಿಧಿಸುತ್ತಿರುವವರು. ಆದರೆ ಚುನಾವಣೆಗೆ ಮುನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಅರ್ಹತೆ ದುರ್ದೈವಶಾತ್ ಕಾಂಗ್ರೆಸ್ ಪಕ್ಷಕ್ಕಿಲ್ಲ. ಬಿಜೆಪಿ ಮೋದಿಜೀಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿದೆ. ಹಿಂದೆ ಇಂದಿರಾ, ರಾಜೀವ್ ಗಾಂಧಿ ಅಲೆ ಇತ್ತು. ಈ ಸರ್ತಿ ಮೋದಿ ಅಲೆ ಇದೆ. ಜೊತೆಗೆ ಯುಪಿಎ ಸರಕಾರದ ದುರಾಡಳಿತವಿದೆ. ಹೀಗಾಗಿ, ಪೂಜಾರಿಯವರನ್ನು ಸೋಲಿಸಲು ಇಷ್ಟು ಕಾರಣಗಳು ಸಾಕು, ಏನಂತೀರಾ..
ಪ್ರ; ಐದು ವರ್ಷ ಸಂಸದರಾಗಿದ್ದೀರಿ, ಈ ಅವಧಿಯಲ್ಲಿ ಏನು ಬದಲಾವಣೆ ತಂದಿದ್ದೀರಿ?
ನಳಿನ್ : ಐದು ವರ್ಷಗಳಲ್ಲಿ ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ಡೇನೆ. ನೀವು ಪತ್ರಿಕೆಯಲ್ಲಿ ನೋಡಿರುತ್ತೀರಿ. ನಿಧಿ ವಿನಿಯೋಗದಲ್ಲಿ ರಾಜ್ಯದಲ್ಲಿ ನಾನು ನಂಬರ್ ಒನ್ ಸ್ಥಾನದಲ್ಲಿದ್ದೇನೆ. ಈ ಬಾರಿಯ ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ನನಗೆ ದೇಶದಲ್ಲೇ 24ನೇ rank ನೀಡಿದ್ದಾರೆ. ನನ್ನ ಕ್ಷೇತ್ರದ ಜನತೆಗೆ ಸಲ್ಲಬೇಕಾದ ಸಾರ್ವಜನಿಕ ಸವಲತ್ತುಗಳು ಏನಿವೆ ಅದಕ್ಕೆ ನಾನು ವಂಚನೆ ಮಾಡಿಲ್ಲ. ನಿಡ್ಡೋಡಿಯಲ್ಲಿ ಉಷ್ಣ ಸ್ಥಾವರ ಬರುವುದು ಬೇಡ ಎಂದು ಅಲ್ಲಿನ ಜನರ ಹೋರಾಟ ಮಾಡಿದರು, ನಾನು ಅವರ ಹೋರಾಟಕ್ಕೆ ಬೆಂಬಲ ನೀಡಿದೆ. ಸಂಸತ್ತಿನಲ್ಲೂ ಅದರ ವಿರುದ್ಧ ಧ್ವನಿ ಎತ್ತಿದೆ. SEZ ಪ್ರಕರಣದಲ್ಲಿ ಭೂಮಿ ಕಳೆದುಕೊಂಡವರಿಗೆ ಹೋರಾಟ ಮಾಡಿ ಮತ್ತೆ ಭೂಮಿ ವಾಪಸ್ ಕೊಡಿಸಿದ್ದೇನೆ. ರಾಷ್ಟ್ರ ಮಟ್ಟದಲ್ಲಿ ಮೋದಿ ವರ್ಚಸ್ಸು, ಸ್ಥಳೀಯ ಮಟ್ಟದಲ್ಲಿ ನನ್ನ ಕೆಲಸ ಎರಡೂ ನಡೆಯುತ್ತಿದೆ.
ಪ್ರ: ಕರಾವಳಿಯ ಎಲ್ಲಾ ಬಿಜೆಪಿ ಚಟುವಟಿಕೆ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಅಣಿತಿಯಂತೆ ನಡೆಯುತ್ತದೆ ಎನ್ನುವ ಮಾತಿದೆ. ಈ ಬಗ್ಗೆ?
ನಳಿನ್ : ಕಲ್ಲಡ್ಕ ಪ್ರಭಾಕರ್ ಭಟ್ರು ಹಿರಿಯರು, ಸಂಘದ ಪ್ರಮುಖರು. ನಾವೆಲ್ಲಾ ಸಂಘದ ಮೂಲಕ ಜನಪರ ಕೆಲಸ ಮಾಡಿ ಬಂದಿರುವವರು. ನಮ್ಮಲ್ಲಿ ಹಿರಿಯಗೆ ಗೌರವ ಕೊಡುವ ಸಂಸ್ಕೃತಿಯಿದೆ. ನಾವು ಅವರ ಸಲಹೆ ಕೇಳುತ್ತೇವೆ, ಇದರಲ್ಲಿ ತಪ್ಪೇನಿದೆ. ಅವರದ್ದು ಸಂಘಟನೆ ನಮ್ಮದು ಪಕ್ಷ. ನಾವಾಗಿ ಅವರ ಸಲಹೆ ಕೇಳುತ್ತೇವೆಯೇ ಹೊರತು, ಅವರು ಬಿಜೆಪಿ ಚಟುವಟಿಕೆಗೆ ತಲೆ ಹಾಕುವುದಿಲ್ಲ.
ಪ್ರ: ಶಿವಮೊಗ್ಗದಲ್ಲಿ ಏನ್ ಆಗಬಹುದು ಸಾರ್?
ನಳಿನ್ : ಮುಖ್ಯಮಂತ್ರಿ ಆದ ಮೇಲೆ ಯಡಿಯೂರಪ್ಪ ಶಿವಮೊಗ್ಗವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದರು. ಶಿಕಾರಿಪುರದಂತಹ ಪ್ರದೇಶದಲ್ಲೂ ಇವತ್ತು ಆಧುನಿಕ ಸವಲತ್ತುಗಳು ಸಿಗುತ್ತಿವೆ. ಕ್ಷೇತ್ರದ ಜೊತೆಗೆ ನಿಕಟ ಸಂಪರ್ಕವನ್ನು ಬಿಎಸ್ವೈ ಹೊಂದಿದ್ದಾರೆ. ಬೆಂಗಳೂರಿನಿಂದ ಬಂದು ನಾಮಪತ್ರ ಹಾಕಿ ಮತದಾರರ ಪರಿಚಯ ಮಾಡಿಸಿಕೊಂಡು ಬಂದವರಲ್ಲ ಯಡಿಯೂರಪ್ಪ. ಇಡೀ ಕ್ಷೇತ್ರದ ಜನತೆಗೆ ಯಡಿಯೂರಪ್ಪ ಅವರ ಪರಿಚಯವಿದೆ. ಜೆಡಿಎಸ್ ನವರು ಅಭ್ಯರ್ಥಿಯನ್ನು ಮತದಾರರಿಗೆ ಪರಿಚಯ ಮಾಡುವಂತಹ ಪ್ರಾಥಮಿಕ ಹಂತದಲ್ಲಿದ್ದಾರೆ. ಆದುದರಿಂದ ಶಿವಮೊಗ್ಗದಲ್ಲಿ ವಾತಾವರಣ ಬಿಜೆಪಿಯ ಪರವಾಗಿದೆ.
Source : http://goo.gl/b9K4Tc