ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಕಚೇರಿಯ ಕೂಗಳತೆಯ ದೂರದಲ್ಲಿ ಮಂಗಳವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲೆ ಪಕ್ಕದ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತ ಪಟ್ಟ ಘಟನಾ ಸ್ಥಳಕ್ಕೆ ಬುಧವಾರ ಸಂಜೆ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಾಯದ ಭೀತಿಯಿಂದ ಮಂಗಳವಾರ ರಾತ್ರಿಯೇ ಸ್ಥಳಾಂತರಗೊಂಡ ಕುಟುಂಬಗಳಿಗೆ ಸದ್ಯಕ್ಕೆ ಬಾಡಿಗೆ ಮನೆಯ ವ್ಯವಸ್ಥೆ ಕಲ್ಪಿಸಿ ಅದರ ಬಾಡಿಗೆಯನ್ನು ಪಂಚಾಯತ್ ವತಿಯಿಂದಲೇ ಪಾವತಿಸುವಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆಯೆಂದು ಸಂಸದ ನಳಿನ್ ಕುಮಾರ್ ಬಿ.ಸಿ. ರೋಡಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೆ ಪಂಚಾಯತ್ ಅಧಿಕಾರಿಗಳು ಕೂಡಾ ಸಮ್ಮತಿಸಿದ್ದಾರೆ ಎಂದು ತಿಳಿಸಿದ ಅವರು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ , ಮಂಗಳೂರು ಕ್ಷೇತ್ರ ಬಿ.ಜೆ.ಪಿ. ಸಮಿತಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಅಹವಾಲು ಸ್ವೀಕಾರ: ಬಳಿಕ ಬಿ.ಸಿ. ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದರಲ್ಲದೆ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ ಕುರಿತಾದ ಆಹವಾಲುಗಳನ್ನು ಸ್ವೀಕರಿಸಿದರು. ಇದರಲ್ಲಿ ಹೆಚ್ಚಿನವು ರಸ್ತೆ ನಿರ್ಮಾಣದ ಬಗ್ಗೆ ಮನವಿಗಳು ಸೇರಿತ್ತು.
ಈ ಸಂದರ್ಭ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಬಿ.ಜೆ.ಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಾ.ಪಂ.ಅಧ್ಯಕ್ಷ ಯಶವಂತ ಡಿ. ಜಿ.ಪಂ.ಸದಸ್ಯರಾದ ಚೆನ್ನಪ್ಪ ಕೊಟ್ಯಾನ್, ಸಂತೊಷ್ ಕುಮಾರ್ ಬೋಳಿಯಾರ್, ತುಂಗಪ್ಪ ಬಂಗೇರ, ಪುರುಷ ಎನ್ ಸಾಲಿಯಾನ್, ಮೋಹನ್ ಪಿ.ಎಸ್, ದೇವಪ್ಪ ಪೂಜಾರಿ, ದೇವದಾಸ ಶೆಟ್ಟಿ, ರಾಮ್‌ದಾಸ ಬಂಟ್ವಾಳ. ದಿನೇಶ್ ಭಂಡಾರಿ, ಆನಂದ ಶಂಭೂರು, ದಿನೇಶ್ ಅಮ್ಟೂರು, ಕೃಷ್ಣಪ್ಪ ಪೂಜಾರಿ ದೊಟ, ಪುಷ್ಪರಾಜ ಶೆಟ್ಟಿ , ಗೋಪಾಲ ಸುವರ್ಣ ಮೊದಲಾದವರಿದ್ದರು.